ಸಂಪಾದಕೀಯ- ತಲ್ಲಣಿಸದಿರು ಕಂಡ್ಯ ತಾಳು ಮನವೆ…

ಪುರಂದರ ದಾಸರ ಈ ಸಾಲುಗಳು ನಮಗೆ ಈ ಸಂಕಷ್ಟದ ಸಮಯದಲ್ಲಿ ಹೆಚ್ಚು ಪ್ರಸ್ತುತ ಅಂತ ಅನ್ನಿಸ್ತಾ ಇದೆ. ನಮ್ಮ ತಾಳ್ಮೆ ಮಿತಿಯನ್ನು ನಾವು ಮೀರಿ ಆಗಿದೆ. ಇದು ಶತಮಾನದ ದುರಂತ. ನೂರು ವರ್ಷಕ್ಕೆ ಒಮ್ಮೆ ಬರುವ ಸಾಂಕ್ರಾಮಿಕ ಪೀಡೆ.
ಕೊರೋನಾ ನಾವು ನಿರೀಕ್ಷೆ ಮಾಡಿರಲಿಲ್ಲ. ಮೊದಲ ಅಲೆ ಬಂದಾಗ ನಮ್ಮ ಹತ್ತಿರ ಸಿದ್ಧತೆ ಇರಲಿಲ್ಲ. ಎರಡನೇ ಅಲೆ ಬರ್ತಾ ಇದೆ ಎಂದು ತಜ್ಞರು ವರದಿ ಕೊಟ್ಟರೂ ನಾವು ಮೈ ಮರೆತು ಬಿಟ್ಟಿದ್ದೆವು. ಐದು ರಾಜ್ಯಗಳ ಚುನಾವಣೆ, ಕುಂಭ ಮೇಳ ಇತ್ಯಾದಿಗಳು ಅದೇ ಕಾಯಿಲೆಗೆ ರತ್ನಗಂಬಳಿ ಹಾಸಿ ಕೊಟ್ಟವು. ನಮಗೆ ಕಳೆದ ಆರು ತಿಂಗಳ ಅವಧಿಯಲ್ಲಿ ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್, ಸ್ಯಾನಿಟೈಸರ್ ಮರೆತೇ ಹೋಗಿದ್ದವು. ಅದ್ದೂರಿಯ ಮದುವೆಗಳು, ಮೆಹೆಂದಿ ಕಾರ್ಯಕ್ರಮಗಳು, ಊರ ಜಾತ್ರೆ, ನೇಮ, ಸಾಂತ್ ಮಾರಿ, ಊರೂಸ್ ಎಲ್ಲವೂ ಅದ್ದೂರಿಯಾಗಿ ನಡೆದವು. ಈಗ ಎರಡನೆಯ ಅಲೆ ಬಂದು ಅಪ್ಪಳಿಸುವ ಸಂದರ್ಭದಲ್ಲಿ ನಾವು ಮತ್ತೆ ಕುಸಿದು ಹೋಗಿದ್ದೇವೆ. ಆರ್ಥಿಕವಾಗಿ ಪೆಟ್ಟು ತಿಂದಿದ್ದೇವೆ. ಕೆಲಸ ಕಳೆದು ಕೊಂಡಿದ್ದೇವೆ. ಬದುಕನ್ನು ಕಳೆದು ಕೊಂಡಿದ್ದೇವೆ. ನಮ್ಮ ಬಂಧುಗಳು, ಹತ್ತಿರದವರು, ಗೆಳೆಯರು ಅನೇಕ ಮಂದಿ ನಮ್ಮನ್ನು ಅಗಲಿದ್ದಾರೆ. ಸದ್ಯಕ್ಕಂತೂ ನಾವು ಚೇತರಿಸಿಕೊಳ್ಳುವುದು ಕಷ್ಟ ಅನ್ನಿಸ್ತಾ ಇದೆ. ಪರಿಣತರು ಹೇಳುವ ಪ್ರಕಾರ 2021ರ ಇಡೀ ವರ್ಷ ಇದೇ ಪರಿಸ್ಥಿತಿ ಮುಂದುವರಿಯುವುದು ಖಂಡಿತ.

ಈ ಸಂದರ್ಭದಲ್ಲಿ ನಾವು ಹೆಚ್ಚು ತಾಳ್ಮೆಯಿಂದ ವ್ಯವಹಾರ ಮಾಡಬೇಕು. ಆರ್ಥಿಕವಾಗಿ ನಷ್ಟ ಆದರೆ ಮುಂದೆ ತುಂಬಿಕೊಳ್ಳಬಹುದು. ಆದರೆ ಜೀವ ಹೋದರೆ ಮತ್ತೆ ಪಡೆಯುವುದು ಕಷ್ಟ. ನಮ್ಮಲ್ಲಿ ಹಲವರಿಗೆ ಮನೆಯಲ್ಲಿ ಕುಳಿತು ಕೊಳ್ಳುವುದೇ ಕಷ್ಟ ಆಗ್ತಾ ಇದೆ. ನಮ್ಮದೇ ಮನೆ ನಮಗೆ ಸೆರೆಮನೆ ಆಗುವ ದುರಂತ ಆಗಬಾರದು. ನಮ್ಮದೇ ಮನೆಯವರು, ಕುಟುಂಬದವರು ನಮಗೆ ಹೊಂದಾಣಿಕೆ ಆಗ್ತಾ ಇಲ್ಲ ಅಂತಾದರೆ ನಾವು ಯೋಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಮನೆಯಲ್ಲಿ ಕ್ರಿಯಾತ್ಮಕ ಆದ ಚಟುವಟಿಕೆಗಳನ್ನು ಜೋಡಿಸಿಕೊಳ್ಳ ಬೇಕಾದ ಅನಿವಾರ್ಯತೆ ಇದೆ. ಬಿಟ್ಟು ಹೋದ ಓದುವ ಹವ್ಯಾಸ, ಬರೆಯುವ ಹವ್ಯಾಸ, ತೋಟಗಾರಿಕೆ, ಪದಬಂಧ ಬಿಡಿಸುವುದು, ಸುಡೊಕು ಬಿಡಿಸುವುದು, ಹಾಡುವುದು, ಚಿತ್ರಕಲೆ, ಪೇಂಟಿಂಗ್, ಒಳಾಂಗಣ ಆಟಗಳು… ಹೀಗೆ ಬೇಕಾದಷ್ಟು ಕ್ರಿಯಾತ್ಮಕ ಚಟುವಟಿಕೆ ಜೋಡಿಸಲು ಅವಕಾಶ ಇದೆ. ಲಾಕ್ ಡೌನ್ ಅವಧಿಯ ಇನ್ನೊಂದು ಲಾಭ ಅಂದರೆ ಮನುಷ್ಯ ಸರಳವಾಗಿ ಬದುಕುವುದನ್ನು ಕಲಿತಿದ್ದಾನೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನೆಲ್ಲಾ ಮಾಡಬೇಕು ಎಂದು ಗೂಗಲ್ ಹುಡುಕಲು ಆರಂಭ ಮಾಡಿದ್ದಾನೆ. ಹೊರಗಿನ ಆಹಾರಕ್ಕಿಂತ ಮನೆಯ ಆಹಾರಕ್ಕೆ ಈಗ ಒಗ್ಗಿಕೊಂಡಿದ್ದಾನೆ. ಕಡಿಮೆ ಖರ್ಚಿನ ಮದುವೆ, ಉಪನಯನ, ಧಾರ್ಮಿಕ ಆಚರಣೆಗಳು ಇದೇ ರೀತಿ ಮುಂದುವರಿದರೆ ನಮಗೆ ತುಂಬಾ ಒಳ್ಳೆಯದು. ನದಿಗಳು, ಪರಿಸರ ತುಂಬಾ ಸ್ವಚ್ವ ಆಗಿದೆ. ಇವುಗಳು ನಮಗೆ ನಿಜವಾಗಿಯೂ ಲಾಕ್ ಡೌನ್ ಜೀವನದ ಲಾಭಗಳು.

ಕೊರೋನಾ ನಂತರದ ಜೀವನ ಖಂಡಿತ ಮೊದಲಿನ ಹಾಗೆ ಇರುವುದಿಲ್ಲ. ಅದಕ್ಕೆ ಈಗಲೇ ನಾವು ಮಾನಸಿಕವಾಗಿ ಸಿದ್ಧತೆ ನಡೆಸಬೇಕಾಗಿದೆ. ನಮ್ಮ ಬದುಕು ಒಂದು ಹಂತದಲ್ಲಿ ಶೂನ್ಯದಿಂದ ಆರಂಭ ಆಗಿತ್ತು. ಈಗ ಮತ್ತೆ ಶೂನ್ಯಕ್ಕೆ ಬಂದಿದೆ. ಮತ್ತೆ ಬದುಕನ್ನು ಕಟ್ಟುವ ಕೆಲಸ ಆರಂಭ ಆಗಬೇಕು. ಅದಕ್ಕೆ ಪ್ರಬಲವಾದ ಇಚ್ಛಾಶಕ್ತಿ ಬೇಕು. ಆತ್ಮವಿಶ್ವಾಸ ಬೇಕು.ಆರ್ಥಿಕ ಶಿಸ್ತು ಬೇಕು. ಕೊಳ್ಳುಬಾಕತನ ಕಡಿಮೆ ಆಗಬೇಕು. ಸರಳವಾಗಿ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಷ್ಠೆ ಬಿಟ್ಟು ಬದುಕಬೇಕು. ಸಕಾರಾತ್ಮಕ ಮನೋಭಾವ ಹೊಂದಬೇಕು. ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡಿ ಬದುಕು ಕಟ್ಟಬೇಕು. ಎಲ್ಲಕಿಂತ ಮುಖ್ಯವಾಗಿ ಬೆಟ್ಟದಷ್ಟು ತಾಳ್ಮೆ ಬೇಕು. ಮತ್ತೆ ಗೆದ್ದು ಬರುವೆ ಎಂಬ ಭರವಸೆಯೇ ನಮ್ಮನ್ನು ಗೆಲ್ಲಿಸಬೇಕು. ಕೊರೋನಾ ಗೆಲ್ಲಲು ಜೊತೆ ಸೇರಿ ಹೋರಾಡುವ ಆಗಬಹುದಾ?

















































































error: Content is protected !!
Scroll to Top