ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಕಾನೂನಿನ ಅಂಶಗಳು

  1. ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್ ಪಡಕೊಂಡ ವ್ಯಕ್ತಿ ನ್ಯಾಯಾಲಯಕ್ಕೆ ದೂರನ್ನು ನೀಡುವ ಮೊದಲು ಚೆಕ್ಕನ್ನು ಒಂದು ಬಾರಿ ಮಾತ್ರ ಬ್ಯಾಂಕಿಗೆ ಹಾಜರು ಮಾಡಬೇಕೆಂಬ ನಿಯಮ ಇರುವುದಿಲ್ಲ. ಚೆಕ್ಕಿನ ಮೇಲೆ ನಮೂದಿಸಿದ ದಿನಾಂಕದ 3 ತಿಂಗಳ ವಾಯಿದೆ ಒಳಗಾಗಿ ಚೆಕ್ಕನ್ನು ಆತ ಎಷ್ಟು ಬಾರಿಯಾದರೂ ಬ್ಯಾಂಕಿಗೆ ಹಾಜರುಪಡಿಸಬಹುದು. ಆದರೆ ಚೆಕ್ ಅಮಾನ್ಯಗೊಂಡ ಬಗ್ಗೆ ಬ್ಯಾಂಕಿನಿಂದ ಹಿಂಬರಹ ಪಡಕೊಂಡು ಚೆಕ್ ನೀಡಿದಾತನಿಂದ ಚೆಕ್ಕಿನ ಹಣವನ್ನು ಡಿಮಾಂಡ್ ಮಾಡಿ ನೋಟೀಸು ಕಳುಹಿಸಿದ ನಂತರ ನಿಗದಿತ ಅವಧಿಯ ಒಳಗಾಗಿ ಚೆಕ್ ಹೊಂದಿದ ವ್ಯಕ್ತಿ ಚೆಕ್ ಅಮಾನ್ಯ ಪ್ರಕರಣವನ್ನು ನ್ಯಾಯಾಲಯಕ್ಕೆ ದಾಖಲು ಮಾಡಬೇಕಾಗುತ್ತದೆ.
  2. ಚೆಕ್ ಪಡೆದ ವ್ಯಕ್ತಿ ಚೆಕ್ ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಜರು ಪಡಿಸಿದಾಗ ಚೆಕ್ ನೀಡಿದ ವ್ಯಕ್ತಿಯ ಖಾತೆ ಮುಚ್ಚಲಾಗಿದೆಯೆಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಾಗ ಚೆಕ್ಕನ್ನು ಪುನಃ ಬ್ಯಾಂಕಿಗೆ ಹಾಜರುಪಡಿಸಲು ಕಾನೂನಿನ ಪ್ರಕಾರ ಅವಕಾಶ ಇರುವುದಿಲ್ಲ.
  3. ಚೆಕ್ ಅಮಾನ್ಯ ಪ್ರಕರಣಕ್ಕೆ ಒಳಪಡುವ 3 ಸಂದರ್ಭಗಳು ಯಾವುದೆಂದರೆ:
  4. ನಗದೀಕರಣಕ್ಕಾಗಿ ಹಾಜರುಪಡಿಸಿದ ಚೆಕ್ಕಿಗೆ ಸಂಬಂಧಪಟ್ಟ ಬ್ಯಾಂಕ್ ಖಾತೆಯಲ್ಲಿ ಹಣ ಇರುವುದಿಲ್ಲ ಎಂಬ ಷರಾದೊಂದಿಗೆ ಚೆಕ್ ಹಿಂತಿರುಗಿದಾಗ,
  5. ಚೆಕ್ ನೀಡಿದಾತ ಚೆಕ್ ಪಡಕೊಂಡಾತನಿಗೆ ಯಾವುದೇ ಮುನ್ಸೂಚನೆ ನೀಡದೆ ಚೆಕ್ಕಿಗೆ ಸಂಬಂಧಪಟ್ಟ ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿದಾಗ,
  6. ಚೆಕ್ ನೀಡಿದಾತ ಚೆಕ್ ಪಡಕೊಂಡಾತನಿಗೆ ಯಾವುದೇ ಮುನ್ಸೂಚನೆ ನೀಡದೆ ಚೆಕ್ಕಿಗೆ ಸಂಬಂಧಪಟ್ಟಂತೆ ಹಣ ಪಾವತಿ ತಡೆ ಹಿಡಿಯುವಂತೆ ಬ್ಯಾಂಕಿಗೆ ತಿಳಿಸಿದಾಗ ಅಥವಾ ತಡೆ ಹಿಡಿದ ಸಂದರ್ಭದಲ್ಲಿ.
  7. ಚೆಕ್ ಅಮಾನ್ಯ ಪ್ರಕರಣಕ್ಕೆ ಒಳಪಡದ ಸಂದರ್ಭಗಳು:
  8. ಚೆಕ್ ನೀಡಿದಾತನ ಸಹಿಯ ವ್ಯತ್ಯಾಸವಿದ್ದಾಗ,
  9. ಚೆಕ್ಕಿನ ಮೇಲೆ ನಮೂದಿಸಿದ ದಿನಾಂಕ ಮತ್ತು ಇತರ ವಿವರಗಳ ಅಕ್ಷರಗಳಲ್ಲಿ ವ್ಯತ್ಯಾಸವಿದ್ದಾಗ,
  10. ಚೆಕ್ಕಿನ ಮೇಲೆ ನಮೂದಿಸಿದ ಬ್ಯಾಂಕ್ ಅಸ್ತಿತ್ವದಲ್ಲಿ ಇಲ್ಲದಿದ್ದಾಗ.
  11. ಇಂತಹ ಸಂದರ್ಭಗಳಲ್ಲಿ ಚೆಕ್ ಹೊಂದಿದಾತನಿಗೆ ಸಿಗಬಹುದಾದ ಕಾನೂನು ರೀತಿಯ ಪರಿಹಾರವೆಂದರೆ ಆತ ಚೆಕ್ ನೀಡಿದಾತನ ವಿರುದ್ಧ ಮೋಸ ಮತ್ತು ವಂಚನೆಯ ಆರೋಪದ ಮೇಲೆ ಸಂಬಂಧಪಟ್ಟ ಕ್ರಿಮಿನಲ್ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 420 ರಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಗೆ ಶಿಕ್ಷೆ ಕೊಡಿಸುವಂತೆ ಮತ್ತು ಸೂಕ್ತ ಪರಿಹಾರವನ್ನು ತಾನು ಹೊಂದುವಂತೆ ಪ್ರಯತ್ನಿಸಬಹುದು.
  12. ಚೆಕ್ಕು ಅಮಾನ್ಯ ಪ್ರಕರಣದಲ್ಲಿ ನ್ಯಾಯಾಲಯವು ದೂರುದಾರನಿಗೆ ಚೆಕ್ ನೀಡಿದಾತನಿಂದ ಚೆಕ್ಕಿನ ಮೊತ್ತವನ್ನು ಪರಿಹಾರವಾಗಿ ಕೊಡಿಸುವ ಅಧಿಕಾರ ಹೊಂದಿರುತ್ತದೆ. ದಂಡ ಪ್ರಕ್ರಿಯಾ ಸಂಹಿತೆ ಕಲಂ 357 ರಡಿಯಲ್ಲಿ ನ್ಯಾಯಾಲಯವು ತನ್ನ ವಿವೇಚನಾಯುತ ಅಧಿಕಾರವನ್ನು ಚಲಾಯಿಸಿ ಚೆಕ್ಕಿನ ಮೊತ್ತವನ್ನಾಗಲಿ ಅಥವಾ ಚೆಕ್ಕಿನ ಮೊತ್ತದ ದುಪ್ಪಟ್ಟನ್ನಾಗಲಿ ಅಥವಾ ಚೆಕ್ಕಿನ ಮೊತ್ತಕಿಂತ ಇಂತಿಷ್ಟು ಹಣವನ್ನು ಪರಿಹಾರ ರೂಪದಲ್ಲಿ ಚೆಕ್ ನೀಡಿದಾತ ಅಂದರೆ ಆರೋಪಿ ಚೆಕ್ ಪಡಕೊಂಡಾತನಿಗೆ ಅಂದರೆ ದೂರುದಾರನಿಗೆ ಕೊಡುವಂತೆ ಆದೇಶಿಸಬಹುದು ಅಥವಾ ವರ್ಗಾವಣೆ ಲಿಖಿತ ಪತ್ರಗಳ ಕಾಯ್ದೆ ಕಲ್ಂ 138 ರಂತೆ ಚೆಕ್ಕಿನ ಹಣ ಅಥವಾ ದುಪ್ಪಟ್ಟು ಹಣ, 2 ವರ್ಷಗಳ ಸಾದಾ ಕಾರಾವಾಸ ಅಥವಾ ಎರಡೂ ಅಥವಾ ದಂಡ ವಿದಿಸಿ ಶಿಕ್ಷೆ ನೀಡಬಹುದು.
  13. ದಂಡ ಪ್ರಕ್ರೀಯಾ ಸಂಹಿತೆ ಕಲಂ 421 ರಡಿಯಲ್ಲಿ ಆರೋಪಿತನು ನ್ಯಾಯಾಲಯದ ತೀರ್ಪಿನಂತೆ ನಡೆದುಕೊಂಡಿಲ್ಲವೆಂತ ಮತ್ತು ಆರೋಪಿತನಿಗೆ ಪರಿಹಾರದ ಹಣವನ್ನು ಕೊಡುವ ಸಾಮರ್ಥ್ಯ ಇದೆ ಎಂತ ದೂರುದಾರ
    ನ್ಯಾಯಾಲಯಕ್ಕೆ ತಿಳಿಸಿ ಆರೋಪಿತನಿಗೆ ಸಂಬಂಧಿಸಿದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಕೋರ್ಟ್ ಆದೇಶದ ಮೂಲಕ ಜಪ್ತಿ ಮಾಡಿ ತನ್ನ ಹಣವನ್ನು ವಸೂಲಾತಿ ಮಾಡಿಕೊಳ್ಳಬಹುದು.
  14. ಸಂಬಂಧಪಟ್ಟ ಕ್ರಿಮಿನಲ್ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ಪ್ರಕರಣ ಬಾಕಿ ಇರುವಾಗ, ವರ್ಗಾವಣೆ ಲಿಖಿತ ಪತ್ರಗಳ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿ ಚೆಕ್ಕನ್ನು ಹೊಂದಿದ ವ್ಯಕ್ತಿ ತನಗೆ ಬರಬೇಕಾದ ಅಸಲು ಹಾಗೂ ಅದಕ್ಕೆ ಬರಬೇಕಾದ ಬಡ್ಡಿ ಹಾಗೂ ನ್ಯಾಯಾಲಯದ ವೆಚ್ಚವನ್ನು ವಸೂಲಾತಿ ಮಾಡಲು ಸಿವಿಲ್ ವ್ಯಾಜ್ಯ ಹೂಡಲು ಯಾವುದೇ ಪ್ರತಿಬಂದ ಇರುವುದಿಲ್ಲ.
  15. ನೋಂದಾವಣಿಯಾಗದ ಪಾಲುದಾರಿಕೆ ಸಂಸ್ಥೆಯು ಚೆಕ್ಕು ಅಮಾನ್ಯ ಪ್ರಕರಣವನ್ನು ಹೂಡಬಹುದು.
  16. ಸಹಕಾರಿ ಸಂಘಗಳಾಗಲೀ ಅಥವಾ ಸಹಕಾರಿ ಬ್ಯಾಂಕುಗಳಾಗಲೀ ಸಾಲಗಾರರು ಸಾಲ ತೀರುವಳಿಗಾಗಿ ನೀಡಿರುವ ಚೆಕ್ಕು ಅಮಾನ್ಯಗೊಂಡಾಗ ಕ್ರಿಮಿನಲ್ ನ್ಯಾಯಾಲಯದಲ್ಲಿ ಚೆಕ್ ನೀಡಿದಾತನ ವಿರುದ್ದ ಚೆಕ್ಕು ಅಮಾನ್ಯತೆಯ ಪ್ರಕರಣವನ್ನು ಹೂಡಬಹುದು.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 9611682681

















































































error: Content is protected !!
Scroll to Top