ಆರೋಗ್ಯಧಾರ-ಹೀಗಿರಲಿ ನಮ್ಮ ಜೀವನ ಶೈಲಿ

ನಮಗಿರುವುದು ಒಂದೇ ಜೀವನ. ಜೀವನ ಪರ್ಯಂತ ಆರೋಗ್ಯದಿಂದಿರುವುದು ನಮ್ಮಲ್ಲರ ಆಸೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾವು ಬೆಳಿಗ್ಗೆ ತಡವಾಗಿ ಏಳುವುದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೇ ಇರುವುದರಿಂದ ವ್ಯಾಯಾಮ ರಹಿತ ಜೀವನ ಶೈಲಿ ಪಾಲಿಸುವುದರಿಂದ ನಮ್ಮ ಆರೋಗ್ಯ ಕೆಡುವುದು ಖಚಿತ. ಈ ಕುರಿತು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಜೀವನ ಶೈಲಿಯಲ್ಲಿ ಚಿಕ್ಕಪುಟ್ಟ ಬದಲಾವಣೆ ನಮ್ಮ ಆರೋಗ್ಯವನ್ನು ಕಾಪಾಡಲು ಸಹಕರಿಸುತ್ತದೆ.
ಬ್ರಾಹ್ಮೀಮುಹೂರ್ತದಲ್ಲಿ ಏಳುವುದು, ಋತುವಿಗೆ ತಕ್ಕಂತೆ ಆಹಾರ ಸೇವಿಸುವುದು, ದೇಹಕ್ಕೆ ತಕ್ಕಂತೆ ವ್ಯಾಯಾಮ ಮಾಡುವುದು ಹಾಗೂ ಮನಸ್ಸು ಉಲ್ಲಸಿತವಾಗಿರುವುದು ಎಲ್ಲವೂ ಆರೋಗ್ಯಕ್ಕೆ ಪೂರಕ. ಮುಂಜಾನೆ ಕನಿಷ್ಠ ಪಕ್ಷ ಆರು ಗಂಟೆಯ ಒಳಗೆ ಏಳಲು ಪ್ರಯತ್ನಿಸಿ. ಏಳುವುದು ಕಷ್ಟವಾದರೆ ನಿಮಗೆ ಇಷ್ಟವಾದಂತಹ ಕೆಲಸವನ್ನು ಎದ್ದ ತಕ್ಷಣ ಮಾಡಿರಿ ಇದು ನಿಮಗೆ ಏಳಲು ಸ್ಫೂರ್ತಿ ನೀಡುತ್ತದೆ. ಎದ್ದ ತಕ್ಷಣ ದೇವರನ್ನು ನೆನೆದು, ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ಹಾಗೂ ವೃದ್ಧಾಪ್ಯ ದೂರ ಸರಿಯುವುದು. ನಿತ್ಯವು ಅಭ್ಯಂಗ ಸ್ನಾನ ಮಾಡುವುದು, ಋತುವಿಗೆ ತಕ್ಕಂತೆ ಆಹಾರ ಸೇವಿವುದು ಬಹಳ ಪ್ರಯೋಜನಕಾರಿ.

ಪ್ರಕೃತಿಯು ಋತುವಿಗೆ ತಕ್ಕಂತೆ ನಮ್ಮ ದೇಹಕ್ಕೆ ಬೇಕಾಗಿರುವ ತರಕಾರಿ ಹಣ್ಣುಗಳನ್ನು ಸೃಷ್ಟಿಸುತ್ತದೆ. ದೇವರ ಸೃಷ್ಟಿ ಅದ್ಭುತ. ಈ ಸೃಷ್ಟಿಯ ನಿಯಮಗಳನ್ನು ಪಾಲಿಸುವುದೇ ಆಯುರ್ವೇದದಲ್ಲಿ ಹೇಳಿದೆ. ಸೇವಿಸಿದ ಆಹಾರ ಜೀರ್ಣವಾಗದೇ ಮತ್ತೊಮ್ಮೆ ಆಹಾರ ಸೇವಿಸದಿರುವು. ಅದು ಅಜೀರ್ಣಕ್ಕೆ ನಾಂದಿಯಾಗುತ್ತದೆ. ಇದರಿಂದ ಅನೇಕ ರೋಗಗಳು ಬರುವ ಸಂಭವವಿರುತ್ತದೆ ಎನ್ನುತ್ತದೆ ಆಯುರ್ವೇದ. ಶುದ್ಧವಾದ ತೇಗು, ಉತ್ಸಾಹ, ನಿಯಮಿತ ಮಲವಿಸರ್ಜನೆ, ಸಮಯಕ್ಕೆ ಸರಿಯಾಗಿ ಹಸಿವು ಬಾಯಾರಿಕೆ ಯಾದರೆ ತಿಂದ ಆಹಾರ ಜೀರ್ಣವಾಗಿದೆ ಎಂದರ್ಥ.

ಈಗ ಡಿಜಿಟಲ್ ಯುಗ ಎಲ್ಲವೂ ಡಿಜಿಟಲ್ ಮಯ. ಬೆಳಿಗ್ಗೆಯಿಂದ ರಾತ್ರಿಯವರೆಗೂ ದೂರದರ್ಶನ ಮೊಬೈಲ್ ಇಲ್ಲದೇ ನಮ್ಮ ಜೀವನ ಸಾಗದು. ಅದು ಅನಿವಾರ್ಯವೂ ಕೂಡ. ಆದರೆ, ಅದು ದೇಹಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ಅಪಾರ ಹಾನಿಯುಂಟು ಮಾಡುವುದು. ದಿವಸಕ್ಕೆ ಎರಡು ಅಥವಾ ಮೂರು ಗಂಟೆಗಳಿಗಾದರೂ ಯಾವುದೇ ಉಪಕರಣಗಳನ್ನು ಉಪಯೋಗಿಸದೆ ಇರುವುದು ಅಸಾಧ್ಯದ ಮಾತಲ್ಲ. ಧ್ಯಾನ ಹಾಗೂ ಯೋಗವನ್ನು ಜೀವನದ ಅಂಗವನ್ನಾಗಿ ರೂಢಿಸಿಕೊಳ್ಳಿ. ಇದರಿಂದ ದೇಹಾರೋಗ್ಯ ಮಾತ್ರವಲ್ಲದೇ ಮಾನಸಿಕ ಸ್ವಾಸ್ಥ್ಯವು ಉತ್ತಮಗೊಳ್ಳುತ್ತದೆ. ನಿಮಗೋಸ್ಕರ ಒಂದಿಷ್ಟು ಸಮಯ ಮೀಸಲಿಡಿ. ಪ್ರಕೃತಿಯ ಜೊತೆ ಸಮಯವನ್ನು ಕಳೆಯಿರಿ.

ಬೇಸಿಗೆ ಕಾಲವನ್ನು ಬಿಟ್ಟು ಬೇರೆ ಎಲ್ಲಾ ಋತುವಿನಲ್ಲಿ ಮಧ್ಯಾಹ್ನ ನಿದ್ರಿಸುವುದು ನಿಷಿದ್ಧ. ರಾತ್ರಿ ಕನಿಷ್ಠ ಏಳು ಗಂಟೆಗಳ ಕಾಲ ನಿದ್ರಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ರಾತ್ರಿ ಜಾಗರಣೆ ಸಲ್ಲದು. ಕೊನೆಯದಾಗಿ ಸದ್ವ್ರತ ಪಾಲನೆ ಬಹಳ ಆವಶ್ಯಕ. ಸತ್ಯವಾದ ಹಿತವಾದ ಮಾತು ನಿಮ್ಮದಿರಲಿ. ಕ್ರೋಧ, ಭಯ, ಈರ್ಷೆ, ಮೋಹ, ಶೋಕ, ಚಿಂತೆ ಇತ್ಯಾದಿಗಳಿಂದ ಆದಷ್ಟು ದೂರವಿರಿ. ದೇವರನ್ನು ನಂಬಿ ಪ್ರಕ್ರತಿಯನ್ನು ಆರಾಧಿಸಿರಿ. ಪೂಜೆ, ಯಜ್ಞ ಹೋಮ, ಹವನಗಳನ್ನು ಮಾಡಿರಿ. ಬೇರೆಯವರಿಗೆ ಸಹಾಯ ಮಾಡಿರಿ. ನೀವು ಸಂತೋಷವಾಗಿರಿ ಇತರರಿಗೂ ಸಂತೋಷದಿಂದಿರಲು ಬಿಡಿ.

ಡಾ. ಹರ್ಷಾ ಕಾಮತ್‌



































































































error: Content is protected !!
Scroll to Top