ಮಾಳ : ಕಾಲರ್‌ ಸ್ಟಿಕ್ಕರ್‌ ನಿಂದ ಮೃತದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು

0

ಕಾರ್ಕಳ : ಕಾರ್ಕಳ ತಾಲೂಕಿನ ಮಾಳ ಕಾಡಿನಲ್ಲಿ ವ್ಯಕ್ತಿಯೋರ್ವರು ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 12ರಂದು ಬೆಳಕಿಗೆ ಬಂದಿದೆ. ಮೃತದೇಹವನ್ನು ಬಂಟ್ವಾಳ ಸಿದ್ದಕಟ್ಟೆಯ ಕೊರಗಪ್ಪ ಪೂಜಾರಿ (60) ಎಂದು ಗುರುತಿಸಲಾಗಿದೆ. ಪರಿಸರದಲ್ಲಿ ಕೊಳೆತ ವಾಸನೆ ಮೂಗಿಗೆ ಬಡಿಯುತ್ತಿದ್ದರಿಂದ ಸ್ಥಳೀಯರಿಗೆ ಮೃತದೇಹ ಪತ್ತೆಯಾಗಿದ್ದು, ತಕ್ಷಣವೇ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಈ ಕುರಿತು ಮಾಹಿತಿ ನೀಡಿರುತ್ತಾರೆ. ಎಸ್‌ಐ ತೇಜಸ್ವಿ, ಎಎಸ್‌ಐ ಪುಟ್ಟೆಗೌಡ, ಹೆಡ್‌ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ, ಸತೀಶ್‌ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುತ್ತಾರೆ.

ಕೊಳೆತ ದೇಹ
ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಮುಖವೂ ಗುರುತು ಹಿಡಿಯದ ರೀತಿಯಲ್ಲಿತ್ತು. ಹೀಗಾಗಿ ವಾರದ ಹಿಂದೆಯೇ ಕೊರಗಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹೇಳುತ್ತಾರೆ.

ಕಾಲರ್‌ ಸ್ಟಿಕ್ಕರ್‌ನಿಂದ ಗುರುತು ಪತ್ತೆ ಹಚ್ಚಿದ ಪೊಲೀಸರು
ಮೃತದೇಹದಲ್ಲಿದ್ದ ಶರ್ಟ್‌ನ ಕಾಲರ್‌ ನೋಡಿದಾಗ ಅದರಲ್ಲಿ ಸಿದ್ಧಕಟ್ಟೆ ಮೂಕಾಂಬಿಕಾ ಟೈಲರ್‌ ಹೆಸರಿತ್ತು. ಪಾಕೆಟ್‌ನಲ್ಲಿ ಡಿ. 27ರಂದು ಮೂಡಬಿದ್ರೆಯಿಂದ ಬಜಗೋಳಿಗೆ ಆಗಮಿಸಿದ ಬಸ್‌ ಟಿಕೆಟ್‌ ಕೂಡ ಇತ್ತು. ಸಿದ್ದಕಟ್ಟೆ ಬಂಟ್ವಾಳ ಪೊಲೀಸ್‌ ಠಾಣೆ ವ್ಯಾಪ್ತಿಯಾಗಿರುವುದರಿಂದ ಅಲ್ಲಿನ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಯಿತು. ಈ ವೇಳೆ ಬಂಟ್ವಾಳ ಠಾಣೆಯಲ್ಲಿ 5 ದಿನಗಳ ಹಿಂದೆ ಮಿಸ್ಸಿಂಗ್‌ ಕೇಸ್‌ ನೋಂದಣಿಯಾಗಿದ್ದು, ಪರಿಶೀಲನೆ ನಡೆಸುವಾಗ ಮಿಸ್ಸಿಂಗ್‌ ಕೇಸ್‌ಗೂ ಈ ಮೃತದೇಹಕ್ಕೂ ಹೊಂದಾಣಿಕೆಯಾಗಿತ್ತು. ಬಳಿಕ ವಾರಿಸುದಾರರಿಗೆ ಮಾಹಿತಿ ನೀಡಲಾಯಿತು.

ಕಾರ್ಕಳದಲ್ಲಿ ಇಂತಹ ಪ್ರಕರಣ ಕಂಡುಬಂದಾಗ ನೆರವಾಗುವುದು ಜರಿಗುಡ್ಡೆಯ ಆಯಿಷಾ. ಜ. 12ರಂದು ಆಯಿಷಾ ಅವರು ಪೊಲೀಸರೊಂದಿಗೆ ಮಾಳಕ್ಕೆ ತೆರಳಿ ಕೊಳೆತೆ ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಸರಕಾರಿ ಆಸ್ಪತ್ರೆಗೆ ಧಾವಿಸಿದ ವಾರಿಸುದಾರರು ಮೃತದೇಹವನ್ನು ಪಡೆದರು.

Previous articleಆನೆಕೆರೆಯಲ್ಲಿ ಅಪರಿಚಿತ ಶವ ಪತ್ತೆ
Next articleಕಾರ್ಕಳ : ಅಪ್ರಾಪ್ತ ಚಾಲಕನ ಮೇಲೆ ಪ್ರಕರಣ ದಾಖಲು

LEAVE A REPLY

Please enter your comment!
Please enter your name here