ಕಾರ್ಕಳ : ತಾಲೂಕಿನ ಕಡ್ತಲ ನಿಟ್ಟೆ, ಕುಕ್ಕುಂದೂರು, ಮರ್ಣೆ, ಶಿರ್ಲಾಲು, ಕೆರ್ವಾಶೆ, ಮಾಳ, ಮುಡಾರು, ದುರ್ಗಾ, ಎರ್ಲಪ್ಪಾಡಿ, ಬೈಲೂರು, ನೀರೆ, ಪಳ್ಳಿ, ಕಲ್ಯಾ, ನಿಟ್ಟೆ, ಸಾಣೂರು, ನಲ್ಲೂರು, ರೆಂಜಾಳ, ಇರ್ವತ್ತೂರು, ಬೋಳ, ಕಾಂತಾವರ, ಬೆಳ್ಮಣ್, ನಂದಳಿಕೆ ಪಂಚಾಯತ್ಗಳಲ್ಲಿ ಬಿಜೆಪಿ ಬೆಂಬಲಿತರು ಸ್ಪಷ್ಟ ಬಹುಮತ ದಾಖಲಿಸಿದ್ದಾರೆ. ಹೆಬ್ರಿ ತಾಲೂಕಿನ ಮುದ್ರಾಡಿ ನಾಡ್ಪಾಲು ಕಾಂಗ್ರೆಸ್ ಮುಕ್ತವಾಗಿದ್ದು, ಶಿವಪುರದಲ್ಲೂ ಮೇಲುಗೈ ಸಾಧಿಸಿದೆ. ಕಾರ್ಕಳ ತಾಲೂಕಿನ ಇನ್ನಾ, ಈದು, ಹೆಬ್ರಿಯ ಮಡಾಮಕ್ಕಿ ಗ್ರಾ.ಪಂ. ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ.
ಗೆಲುವಿನ ನಗೆ ಬೀರಿದ ಪಕ್ಷೇತರರು
ಕುಚ್ಚೂರು ಗ್ರಾ.ಪಂ. ಪಕ್ಷೇತರರ ಪಾಲಾಗಿದೆ. ಕುಚ್ಚೂರು ಪಂಚಾಯತ್ನ 11 ಸ್ಥಾನಗಳ ಪೈಕಿ 8 ಸ್ಥಾನಗಳು ಪಕ್ಷೇತರರಿಗೆ ಒಲಿದಿದೆ. 3 ಸ್ಥಾನ ಬಿಜೆಪಿ ಪಾಲಾಗಿದೆ. ಉಳಿದಂತೆ ಕಾರ್ಕಳ-ಹೆಬ್ರಿ ಉಭಯ ತಾಲೂಕಿನ ಹಲವು ಸ್ಥಾನಗಳಲ್ಲಿ ಪಕ್ಷೇತರರು ಜಯದ ನಗೆ ಬೀರಿದ್ದಾರೆ.
ಜಿಲ್ಲಾಧಿಕಾರಿ ಭೇಟಿ
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕಾರ್ಕಳದ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವ ಮತ್ತು ಅಧಿಕಾರಿಗಳೇ ಎಣಿಕೆ ಕೊಠಡಿಯಲ್ಲಿ ಮೊಬೈಲ್ ಬಳಸುತ್ತಿರುವ ಕುರಿತು ಆಕ್ಷೇಪ ಕೇಳಿಬಂತು.
ಆವರಣದೊರಗಡೆ ಜಮಾವಣೆ
ಮತ ಎಣಿಕಾ ಕೇಂದ್ರ ಕಾರ್ಕಳದ ಎಂಪಿಎಂ ಪ್ರಥಮ ದರ್ಜೆ ಕಾಲೇಜು ಆವರಣದ ಹೊರಗಡೆ ಅಭ್ಯರ್ಥಿಗಳ ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಬೆಳಿಗ್ಗೆ 7ರ ವೇಳೆಗೆ ಸಾವಿರಾರು ಮಂದಿ ನೆರೆದಿದ್ದರು. ಒಂದೊಂದು ಪಂಚಾಯತ್ ವಾರ್ಡ್ ನ ಮತ ಎಣಿಕೆ ನಡೆಯದೇ ಒಮ್ಮೆಗೆ ಎಲ್ಲ ಪಂಚಾಯತ್ಗಳ ವಾರ್ಡ್ ಎಣಿಕೆ ಕಾರ್ಯ ನಡೆಯಿತು. ಹೀಗಾಗಿ ರಾತ್ರಿ ತನಕವೂ ಯಾವುದೇ ಪಂಚಾಯತ್ನ ಸ್ಪಷ್ಟ ಫಲಿತಾಂಶ ದೊರೆಯಲಿಲ್ಲ. ಅಭ್ಯರ್ಥಿಗಳು ಮತ ಎಣಿಕಾ ಕೇಂದ್ರದಿಂದ ಗೆಲುವಿನ ನಗೆಯೊಂದಿಗೆ ಹೊರಬರುತ್ತಿದ್ದಂತೆ ಜಮಾವಣೆಗೊಂಡ ಜನತೆ ಜೈಕಾರ ಕೂಗುತ್ತಿದ್ದರು. ಬಿರು ಬಿಸಿಲೆನ್ನದೇ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದರು.
ಕೊರೊನಾ ಭಯವಿರಲಿಲ್ಲ
ಅಭ್ಯರ್ಥಿಗಳ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳ ಹಿತೈಷಿಗಳು ಮತ ಎಣಿಕಾ ಕೇಂದ್ರದ ಮುಂದೆ ಗುಂಪು ಗುಂಪಾಗಿದ್ದು ಸಾಮಾಜಿಕ ಅಂತರವೆಂಬುವುದು ಮರೆಯಾಗಿತ್ತು. ಕೊರೊನಾ ಭಯವಿಲ್ಲದೇ ವಿಜೇತರನ್ನು ಹೆಗಲ ಮೇಲೆ ಕೂರಿಸಿಕೊಂಡು ಜೈಕಾರ ಹಾಕುತ್ತಿರುವುದು ಕಂಡುಬಂತು.
ಗೆದ್ದ ಪ್ರಮುಖರು ನೀರೆ ಪಂಚಾಯತ್ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೈದರ್ ಆಲಿ 5ನೇ ಬಾರಿಗೆ ಗೆಲುವು ಸಾಧಿಸಿದರು. ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್, ತಾ.ಪಂ. ಮಾಜಿ ಸದಸ್ಯ ಆಂತೋನಿ ಡಿʼಸೋಜಾ ನಕ್ರೆ, ಈದು ಗ್ರಾ.ಪಂ. ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್ ಗೆಲುವಿನ ಜಯಭೇರಿ ಬಾರಿಸಿದರು.
ಬಿಜೆಪಿ ಗೆಲುವಿನ ಕಾರಣ
ಶಾಸಕ ವಿ. ಸುನಿಲ್ ಕುಮಾರ್ ಅವರ ಸಮರ್ಥ ನಾಯಕತ್ವ, ಕ್ಷೇತ್ರದ ಪ್ರತಿ ವಾರ್ಡ್ನೊಂದಿಗಿನ ನಿರಂತರ ಸಂಪರ್ಕ
ಕ್ಷೇತ್ರಾದಾದ್ಯಂತ ನಡೆದ ಅಭಿವೃದ್ಧಿ ಕಾರ್ಯ-ಫಲಿಸಿದ ಬಿಜೆಪಿ ಚುನಾವಣಾ ತಂತ್ರ
ಹಿಂದುತ್ವ-ಮೋದಿ ವರ್ಚಸ್ಸು
The heading does not justify the article. What are the causes of BJP winning ?