ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಾಗಿ ಡಾ. ಕೆ.ಕಸ್ತೂರಿ ರಂಗನ್ ಸಮಿತಿ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇದೊಂದು ಅವೈಜ್ಞಾನಿಕ ವರದಿಯೆಂದು ಅಭಿಪ್ರಾಯಪಟ್ಟಿರುವ ಸರಕಾರ ತನ್ನ ನಿಲುವನ್ನು ಶೀಘ್ರವೇ ಕೇಂದ್ರಕ್ಕೆ ತಿಳಿಸಲಿದೆ.
ಎನ್ಜಿಟಿಯಲ್ಲಿ(ರಾಷ್ಟ್ರೀಯ ಹಸಿರು ಪೀಠ) ರಾಜ್ಯದ ನಿಲುವಿಗೆ ವ್ಯತಿರಿಕ್ತ ಆದೇಶ ಹೊರಬಿದ್ದರೆ ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಪ್ರಶ್ನಿಸುವ ತೀರ್ಮಾನ ಕೈಗೊಂಡಿದೆ. ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಆನಂದ್ಸಿಂಗ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು, ”ಅವೈಜ್ಞಾನಿಕವಾಗಿರುವ ಡಾ.ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ಹಲವು ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ವರದಿ ತಿರಸ್ಕರಿಸುವ ತೀರ್ಮಾನಕ್ಕೆ ಬರಲಾಗಿದೆ. ಒಂದೆರಡು ದಿನಗಳಲ್ಲೇ ಕೇಂದ್ರಕ್ಕೆ ರಾಜ್ಯದ ನಿಲುವನ್ನು ತಿಳಿಸಿ ಪತ್ರ ಬರೆಯಲಾಗುವುದು,” ಎಂದರು







































