ಶ್ರೀನಗರ, ನ.13 : ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಮೂವರು ಭಾರತೀಯ ಪೋರ್ಟರ್ ಗಳು ಗಾಯಗೊಳ್ಳಲು ಕಾರಣವಾಗಿದ್ದ ಪಾಕಿಸ್ಥಾನದ ಸೇನೆಗೆ ಭಾರತದ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ಭಾರತೀಯ ಯೋಧರು ನೀಡಿದ ತಿರುಗೇಟಿಗೆ ಸುಮಾರು 8 ಪಾಕ್ ಸೈನಿಕರು ಸತ್ತಿದ್ದಾರೆ ಹಾಗೂ ಲಾಂಚ್‌ಪ್ಯಾಡ್ ಹಾಗೂ ಬಂಕರ್‌ಗಳನ್ನು ನಾಶ ಮಾಡಿದೆ.
ಸತ್ತ ಸೈನಿಕರಲ್ಲಿ ಪಾಕ್ ಸೇನೆಯ ಸ್ಪೆಷಲ್ ಸರ್ವಿಸ್ ಗ್ರೂಪ್‌ನ ಮೂವರು ಕಮಾಂಡೋಗಳು ಸೇರಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಇಂದು ಪಾಕ್ ಸೇನೆ ಉರಿ ಮತ್ತು ಗುರೆಝ್ ಸೆಕ್ಟರ್‌ನಲ್ಲಿ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿತ್ತು. ಬಿಎಸ್‌ಎಫ್ ನ ಇಬ್ಬರು ಪೋರ್ಟರ್‌ಗಳ ಸಹಿತ ಮೂರು ಮಂದಿ ಈ ದಾಳಿಯಲ್ಲಿ ಗಾಯಗೊಂಡಿದ್ದರು. ಪೂಂಛ್ ನಲ್ಲಿ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದರು. ಭಾರತೀಯ ಯೋಧರು ಪ್ರತಿದಾಳಿ ನಡೆಸಿ ಪಾಕ್ ಸೇನೆಗೆ ತಕ್ಕ ಪಾಠ ಕಲಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಮೂಲಕ ಉಗ್ರರನ್ನು ಒಳ ನುಸುಳಿಸಲು ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಕೇರಣ್ ಸೆಕ್ಟರ್‌ನಲ್ಲಿ ಅನುಮಾನಾಸ್ಪದ ಚಲನವಲನ ಕಂಡು ಬಂದಾಗ ಭಾರತೀಯ ಸೇನೆ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿತ್ತು. ಅನಂತರ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿ ಶೆಲ್ ದಾಳಿ ಪ್ರಾರಂಭಿಸಿತ್ತು.
ಪಾಕ್ ಸೇನೆಗೆ ತಿರುಗೇಟು : 8 ಸೈನಿಕರ ಹತ್ಯೆ, ಬಂಕರ್ ನಾಶ






















