ಇಂದಿನ ಐಕಾನ್ – ಪರರ ಸುಖದಲ್ಲಿ “ಆನಂದ” ಕಾಣುವ ಮಹೀಂದ್ರಾ

      ಭಾರತದಲ್ಲಿ ಮಹಾ  ಉದ್ಯಮಗಳನ್ನು ಹುಟ್ಟು ಹಾಕಿ ಬಹಳ ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡುತ್ತಿರುವ ಕೀರ್ತಿ ಟಾಟಾ, ಬಿರ್ಲಾ ಮತ್ತು ಅಂಬಾನಿ ಅವರಿಗೆ ಸಲ್ಲಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯಮಗಳ ಬೆಳವಣಿಗೆ ಮತ್ತು ಚಾರಿಟಿಯಲ್ಲಿ ಇನ್ನೊಂದು  ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಆ ಹೆಸರು  ಖಂಡಿತವಾಗಿಯೂ ಆನಂದ್ ಮಹೀಂದ್ರಾ!

     ಆನಂದ ಮಹೀಂದ್ರ ಅವರು ಹುಟ್ಟಿದ್ದು ಮೇ 1,1955ರಂದು.  ಅವರ ಅಜ್ಜ ಬಹಳ ಹಿಂದೆ ಸ್ಥಾಪಿಸಿದ  ಮಹೀಂದ್ರ ಕಂಪೆನಿ ಆಗಲೇ ದೊಡ್ಡ ಮಟ್ಟದಲ್ಲಿ ಹೆಸರು ಪಡೆದಿತ್ತು. ಆನಂದ ಅವರು ಹಾರ್ವರ್ಡ್ ವಿವಿಗೆ ಹೋಗಿ ಎಂಬಿಎ ಓದಿ ಬಂದವರು. 1981ರಲ್ಲಿ  ಮಹೀಂದ್ರ ಸ್ಟೀಲ್ಸ್ ಕಂಪೆನಿಗೆ ಒಬ್ಬ ಸಾಮಾನ್ಯವಾದ ಉದ್ಯೋಗಿ ಆಗಿ ಅವರು  ಸೇರಿದರು. ಅವರದ್ದು ಬಹು ಕ್ಷಿಪ್ರವಾದ ಬೆಳವಣಿಗೆ. ಉದ್ಯಮ ಕಟ್ಟುವುದರಲ್ಲಿ ಅವರು ಮಹಾ ಬುದ್ದಿವಂತ. 2012ರ ಹೊತ್ತಿಗೆ ಅವರು ಮಹೀಂದ್ರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹುದ್ದೆಗೆ ಏರಿ ಆಗಿತ್ತು.

         ಕೇವಲ ಟ್ರಕ್ ಮತ್ತು ವಾಹನಗಳನ್ನು ಉತ್ಪಾದನೆ ಮಾಡುತ್ತಿದ್ದ ಮಹೀಂದ್ರ ಕಂಪೆನಿಯು ಆನಂದ ಅವರ ದೂರದೃಷ್ಟಿ ಮತ್ತು ನಾಯಕತ್ವದ ಗುಣಗಳಿಂದ ಐಟಿ, ಫೈನಾನ್ಸ್, ಇನ್ಶೂರೆನ್ಸ್, ರಿಯಲ್ ಎಸ್ಟೇಟ್, ಲಾಜಿಸ್ಟಿಕ್ಸ್, ಅಗ್ರಿ ಬಿಸಿನೆಸ್, ಮನೋರಂಜನೆ , ಕಟ್ಟಡ ನಿರ್ಮಾಣ…ಹೀಗೆ ನೂರಾರು ರೆಕ್ಕೆಗಳನ್ನು ಚಾಚಿ ಮುನ್ನಡೆಯಿತು. ಕೋಟಕ್ ಮಹೀಂದ್ರ ಬ್ಯಾಂಕು ಸ್ಥಾಪನೆ ಆಯಿತು. ಎಪಿಕ್ ಎಂಬ ಟಿವಿ ಚಾನೆಲ್ ಸ್ಥಾಪನೆ ಆಯಿತು. ತಮ್ಮ ಕಸಿನ್ ಚಾರು ಶರ್ಮಾ ಅವರ ಬೆನ್ನಿಗೆ ನಿಂತು ಪ್ರೊ ಕಬ್ಬಡ್ಡಿ ಲಾಂಚ್ ಆಯಿತು. ಆನಂದ ಮಹೀಂದ್ರ ಅವರ ವಿರಾಟ್ ಬೆಳವಣಿಗೆ ನೋಡುವಾಗ ನಿಜವಾಗಿಯೂ ವಿಸ್ಮಯ ಮೂಡುತ್ತದೆ. ಇಂದು ಅವರ ಕಂಪೆನಿಗಳ ನೆಟ್ ಮೌಲ್ಯ  19 ಬಿಲಿಯನ್ ಯುಎಸ್ ಡಾಲರ್ ದಾಟಿದೆ! ಆನಂದ  ಮಹೀಂದ್ರ ಇಂದು ಭಾರತದ ಟಾಪ್ 10 ಬಿಸಿನೆಸ್ ಲೀಡರ್ಸಲ್ಲಿ ಸ್ಥಾನ ಪಡೆದಿದ್ದಾರೆ.

       ಹಾರ್ವರ್ಡ್ ವಿವಿ ಅವರನ್ನು ತನ್ನ ‘ಅತೀ ಶ್ರೇಷ್ಠ ಪೂರ್ವ ವಿದ್ಯಾರ್ಥಿ’ ಆಗಿ ಗುರುತಿಸಿ ಸನ್ಮಾನಿಸಿದೆ.  ಫಾರ್ಚೂನ್ ಮ್ಯಾಗಝೀನ್ ಅವರನ್ನು ಜಗತ್ತಿನ ಟಾಪ್ 50 ಬಿಸಿನೆಸ್ ನಾಯಕರಲ್ಲಿ ಒಬ್ಬರು ಎಂದೂ, ಏಷಿಯಾದ ಟಾಪ್ 25ರಲ್ಲೀ ಒಬ್ಬರು ಎಂದೂ ಹೆಸರಿಸಿದೆ. ಬಿಸಿನೆಸ್ ಟುಡೇ ಪತ್ರಿಕೆಯು  ಅವರಿಗೆ 2014ರಲ್ಲೀ ‘ CEO OF THE YEAR’ ಪ್ರಶಸ್ತಿಯನ್ನು ನೀಡಿತು. ಭಾರತ ಸರಕಾರ ಅವರಿಗೆ ಈ ವರ್ಷ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವ ನೀಡಿದೆ.

       ಇಷ್ಟೇ ಆಗಿದ್ದರೆ ಆನಂದ ಮಹೀಂದ್ರಾ ಅವರು ನಮಗೆ  ಐಕಾನ್ ಆಗುತ್ತಿರಲಿಲ್ಲ! ಅವರ ಸೇವಾ ಮನೋಭಾವ, ಚಾರಿಟಿ ಕೆಲಸಗಳು, ಸಿಎಸ್ಆರ್ ಚಟುವಟಿಕೆಗಳು ನಮಗೆ ಅದ್ಭುತ ಅನ್ನಿಸುತ್ತವೆ. Kovid ನಿಧಿಗೆ ಬಹಳ ದೊಡ್ಡ ಮೊತ್ತವನ್ನು ಅವರು ದಾನ ಮಾಡಿದ್ದಾರೆ. “ನನ್ಹಿ ಕಲೀ” ಎಂಬ NGO ಸ್ಥಾಪನೆ ಮಾಡಿ ಈ ವರೆಗೆ ಅವಕಾಶವಂಚಿತ 1,30,000 ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ!  ಹಾರ್ವರ್ಡ್ ವಿವಿಯಲ್ಲಿ ಹ್ಯುಮಾನಿಟಿ ಸೆಂಟರ್ ಸ್ಥಾಪನೆ ಮಾಡಲು 10 ಮಿಲಿಯನ್ ಡಾಲರ್ ಹಣವನ್ನು ದಾನ ಮಾಡಿದ್ದಾರೆ. ಪ್ರವಾಹದಿಂದ ತತ್ತರಿಸಿರುವ ರೈತರಿಗೆ ಅವರು ಬೆಂಬಲವಾಗಿ ನಿಂತಿದ್ದಾರೆ. ದುಡಿಯಲು ಮನಸ್ಸು ಇರುವ ರೈತರಿಗೆ ಟ್ರಾಕ್ಟರ್ ಉಡುಗೊರೆ  ನೀಡಿದ್ದಾರೆ. ವನ್ಯಜೀವಿಗಳ ಫೋಟೋಗ್ರಾಫಿ ಅವರ ಆಸಕ್ತಿಯ ವಿಷಯ. ಬಿಡುವು ದೊರೆತಾಗ ಯಾರಿಗೂ ಹೇಳದೆ ಕಾಡಿಗೆ ಹೋಗಿ ಅದ್ಭುತವಾದ ವನ್ಯಜೀವಿಗಳ ಫೋಟೋ ಸೆರೆ ಹಿಡಿದು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸುತ್ತಾರೆ. ಇಡೀ ಭಾರತವನ್ನು ಪ್ರವಾಸ ಮಾಡುತ್ತಾ ಯಾರಿಗೆ ಸಹಾಯದ ಅಗತ್ಯವಿದೆ ಅವರನ್ನು ಗುರುತಿಸಿ ಟ್ವಿಟರ್ ಖಾತೆಯಲ್ಲಿ ಬರೆಯುತ್ತಾರೆ. ತಾವೂ ಸಹಾಯ ಮಾಡುತ್ತಾರೆ.

       ಇತ್ತೀಚೆಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ಏಕಾಂಗಿಯಾಗಿ ಮೂವತ್ತು ವರ್ಷಗಳ ಕಾಲ ಕೆಲಸ ಮಾಡಿ ಮೂರು  ಕಿಲೋಮೀಟರ್ ಉದ್ದವಾದ ಕಾಲುವೆ ನಿರ್ಮಿಸಿದ್ದ ರೈತನ ಬಗ್ಗೆ ಟ್ವೀಟ್ ಮಾಡಿದ್ದು ವೈರಲ್ ಆಗಿತ್ತು. ಆ ರೈತನಿಗೆ ಟ್ರಾಕ್ಟರ್ ಉಡುಗೊರೆ ಕೊಟ್ಟು ಸನ್ಮಾನ ಮಾಡಿದ್ದರು ಆನಂದ್. ತಮಿಳುನಾಡಿನಲ್ಲಿ ಒಂದು ರೂಪಾಯಿಗೆ  ಇಡ್ಲಿ ಮಾರಿ ಹೆಸರು ಮಾಡಿದ್ದ ಕಮಲತಾಲ ಎಂಬ ಅಜ್ಜಿಗೆ  ಎಲ್ಲಾ ಅನೂಕೂಲಗಳನ್ನೂ  ಮಾಡಿಕೊಟ್ಟದ್ದು ಭಾರೀ ಸುದ್ದಿಯಾಗಿತ್ತು. ಪ್ರತೀ ದಿನ ಎಂಬಂತೆ ಆನಂದ ಮಹೀಂದ್ರ  ಅವರ ಟ್ವಿಟರ್ ಖಾತೆಯಲ್ಲಿ ಇಂತಹ ಶ್ರೇಷ್ಟವಾದ  ಉಲ್ಲೇಖಗಳನ್ನು  ನೋಡುವುದೇ ಚಂದ! ತಾನು ಸದ್ದಿಲ್ಲದೆ ಸೇವೆ ಮಾಡುತ್ತಾ,  ಬೇರೆಯವರಿಗೂ ಸೇವೆಯನ್ನು ಮಾಡಲು ಆಮಂತ್ರಿಸುವ ಆನಂದ ಮಹೀಂದ್ರ ನಮಗೆ ಈ ಕಾರಣಕ್ಕೆ ಇಷ್ಟ ಆಗುತ್ತಾರೆ.

ಆನಂದ ಮಹೀಂದ್ರ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಬಹಳಷ್ಟು ಎಂಬ ನುಡಿಯಲ್ಲಿ ಅಗಾಧ ನಂಬಿಕೆ ಇರಿಸಿದ್ದಾರೆ. ಅವರಿಗೆ ಒಳ್ಳೆದಾಗಲಿ.

ಬರಹ – ರಾಜೇಂದ್ರ ಭಟ್ ಕೆ.



































































































error: Content is protected !!
Scroll to Top