ಪಾಟ್ನಾ: ಎಲ್ಲಿಂದಾದರೂ ಕೆಲವು ಕೋಟಿ ರೂಪಾಯಿ ಸಿಕ್ಕಿದರೆ ನಮ್ಮ ಬದುಕು ನೆಟ್ಟಗಾಗಬಹುದು. ಸಾಲಗಳನ್ನು ತೀರಿಸಿ, ಮನೆ ಕಟ್ಟಿ, ಕಾರು ಖರೀದಿಸಿ , ಒಂದಷ್ಟು ಹಣವನ್ನು ಬ್ಯಾಂಕಿನಲ್ಲಿಟ್ಟು, ಹೂಡಿಕೆ ಮಾಡಿ ವ್ಯಾಪಾರ ವಹಿವಾಟು ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆಗೆ ನೆಮ್ಮದಿಯಾಗಿರಬಹುದು ಎಂದು ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ ಎನ್ನುವುದಕ್ಕೆ ಅಮಿತಾಭ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 5 ಕೋ. ರೂ. ಗೆದ್ದು ಸುದ್ದಿಯಾಗಿದ್ದ ಬಿಹಾರದ ಸುಶೀಲ್ ಕುಮಾರ್ ಸಾಕ್ಷಿ.
5 ಕೋ. ರೂ. ಸದ್ದಿಲ್ಲದೆ ಕರಗಿ ಹೋಗಿ ಈಗ ಸುಶೀಲ್ ಕುಮಾರ್ ಬದುಕು ಸಾಗಿಸಲು ಎರಡು ಎಮ್ಮೆ ಸಾಕಿಕೊಂಡಿದ್ದಾರೆ. ಸುದೀರ್ಘವಾದ ಫೇಸ್‌ಬುಕ್ ಪೋಸ್ಟಿನಲ್ಲಿ ಸುಶೀಲ್ ಕುಮಾರ್ 5 ಕೋ. ರೂ. ಗೆದ್ದ ಬಳಿಕ ತನ್ನ ಬದುಕು ಹೇಗೆಲ್ಲ ತಿರುವು ಪಡೆದುಕೊಂಡಿತು ಎನ್ನುವುದನ್ನು ಬರೆದುಕೊಂಡಿದ್ದಾರೆ.
2011ರಲ್ಲಿ ಸುಶೀಲ್ ಕುಮಾರ್ ಕೆಬಿಸಿಯಲ್ಲಿ 5 ಕೋ. ರೂ. ಗೆದ್ದದ್ದು ಅಂತಾರಾಷ್ಟ್ರೀಯ ಸುದ್ದಿಯಾಗಿತ್ತು. 5 ಕೋ.ರೂ. ಗೆದ್ದ ಮೊದಲ ಸ್ಪರ್ಧಿ ಅವರಾಗಿದ್ದರು. ಆ ಸಂದರ್ಭದಲ್ಲಿ ಅವರು ಅಮಿತಾಭ್ ಬಚ್ಚನ್‌ಗೆ ನಾನು ಐಎಎಸ್ ಅಧಿಕಾರಿಯಾಗುತ್ತೇನೆ ಎಂದಿದ್ದರು. ಆದರೆ ಕೊನೆಗೆ ಆದದ್ದು ಪಾಪರ್. ದಿಢೀರ್ ಎಂದು ಬಂದ ಶ್ರೀಮಂತಿಕೆಯನ್ನು ಹೇಗೆ ನಿಭಾಯಿಸುವುದೆಂದು ತಿಳಿಯದೆ ಸುಶೀಲ್ ಕುಮಾರ್ ಸೋತು ಹೋದರು. 2015-2016 ಅಂತೂ ನನ್ನ ಬದುಕಿನ ಕಡುಕಷ್ಟದ ದಿನಗಳಾಗಿದ್ದವು ಎಂದು ಬರೆದುಕೊಂಡಿದ್ದಾರೆ ಸುಶೀಲ್ ಕುಮಾರ್.

5 ಕೋ.ರೂ. ಗೆದ್ದ ಬಳಿಕ ಬಿಹಾರದಲ್ಲಿ ಸುಶೀಲ್ ಕುಮಾರ್ ಸೆಲೆಬ್ರಿಟಿಯಾಗಿಬಿಟ್ಟರು. ಪ್ರತಿ ತಿಂಗಳು 10-15 ಸಮಾರಂಭಗಳಲ್ಲಿ ಭಾಗವಹಿಸಲು ಅವರಿಗೆ ಆಹ್ವಾನವಿರುತ್ತಿತ್ತು.ಇದರಿಂದಾಗಿ ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತು. ಆಗ ಅವರಿಗೆ ಪ್ರಚಾರದ ಹುಚ್ಚು ಕೂಡ ತಲೆಗೇರಿತ್ತಂತೆ. ಮಾಧ್ಯಮವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದರು. ನಿರುದ್ಯೋಗಿ ಎಂದೆನಿಸಿಕೊಳ್ಳಬಾರದೆಂದು ಕಂಡಕಂಡಲೆಲ್ಲ ಹಣ ಹೂಡಿಕೆ ಮಾಡಿದರು. ಆದರೆ ಈ ಎಲ್ಲ ವ್ಯಾಪಾರಗಳು ಮುಳುಗಿ ಕೆಲವು ಕೋಟಿ ನೀರಲ್ಲಿಟ್ಟ ಹೋಮವಾಯಿತು. ಕೈಗೆ 5 ಕೋಟಿ ಬಂದ ಬಳಿಕ ಸುಶೀಲ್‌ಗೆ ದಾನ ಮಾಡುವ ಗೀಳು ಕೂಡ ಸುರುವಾಗಿತ್ತು. ಪ್ರತಿ ತಿಂಗಳು ಸುಮಾರು 50,000 ರೂ. ದಾನವಾಗಿ ಹೋಗುತ್ತಿತ್ತು. ಆದರೆ ಇದರ ಪ್ರಯೋಜನ ಪಡೆದುಕೊಂಡವರಲ್ಲಿ ಅಪಾತ್ರರೇ ಹೆಚ್ಚು.
ಇದೇ ಸಂದರ್ಭದಲ್ಲಿ ಹೆಂಡತಿ ಜೊತೆಗಿನ ಸಂಬಂಧವೂ ಹಳಸತೊಡಗಿತು. ಅಂಧಾದುಂಧಿ ಖರ್ಚುಗಳನ್ನು ಹೆಂಡತಿ ವಿರೋಧಿಸಿದಾಗ ಜಗಳವಾಗುತ್ತಿತ್ತು. ಆಗ ನನಗೆ ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸುವ ವಿವೇಕವೇ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ ಸುಶೀಲ್.
5 ಕೋಟಿ ಗೆದ್ದರೂ ಸುಶೀಲ್ ಗೆ ನಿಯಮಿತವಾದ ಆದಾಯ ಬರುತ್ತಿರಲಿಲ್ಲ. ಓರ್ವ ಸ್ನೇಹಿತನ ಜೊತೆ ಸೇರಿ ದಿಲ್ಲಿಯಲ್ಲಿ ಕೆಲವು ಕಾರುಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟರು. ಈ ವ್ಯವಹಾರಕ್ಕಾಗಿ ಆಗಾಗ ದಿಲ್ಲಿಗೆ ಪ್ರಯಾಣಿಸಬೇಕಾಗುತ್ತಿತ್ತು. ಈ ಸಂದರ್ಭದಲ್ಲಿ ದಿಲ್ಲಿಯಲ್ಲಿ ಕೆಲವು ವಿದ್ಯಾರ್ಥಿಗಳ ಪರಿಚಯವಾಯಿತು. ಅವರ ಜೊತೆಗೆ ಮಾತನಾಡುವಾಗ, ಅವರ ಘಳಕುಬಳುಕುಗಳನ್ನು ನೋಡುವಾಗ ಸುಶೀಲ್‌ಗೆ ತಾನು ಏನೂ ಗೊತ್ತಿಲ್ಲದ ಹಳ್ಳಿಯ ಗುಗ್ಗು, ಬಾವಿಯಲ್ಲಿರುವ ಕಪ್ಪೆ ಎಂಬ ಭಾವನೆ ಬರುತ್ತಿತ್ತು. ಈ ವಿದ್ಯಾರ್ಥಿಗಳ ಜೊತೆ ಸೇರಿ ಕುಡಿಯುವುದನ್ನು, ಸಿಗರೇಟು ಸೇದುವುದನ್ನು ಕಲಿತರು. ಇಂಥ ಕುಡಿತದ ಪಾರ್ಟಿಗಳಲ್ಲಿ ವಿದ್ಯಾರ್ಥಿಗಳು ಸುಶೀಲ್‌ಗೆ ಸಿನೇಮಾ ನಿರ್ಮಿಸುವ ಐಡಿಯಾ ಕೊಟ್ಟರು.

ಈ ಐಡಿಯಾ ತಲೆಗೆ ಹೊಕ್ಕದ್ದೇ ತಡ ಸುಶೀಲ್ ಹಳೆ ಹಿಂದಿ ಸಿನೇಮಾಗಳ ಸಿಡಿ ತಂದು ನೋಡತೊಡಗಿದರು. ಪ್ಯಾಸಾದಂಥ ಸಿನೇಮಾ ಮಾಡಬೇಕೆಂದು ನಿತ್ಯ ಈ ಚಿತ್ರವನ್ನು ವೀಕ್ಷಿಸುತ್ತಿದ್ದರು. ಗಂಡ ತಿಂಗಳುಗಟ್ಟಲೆ ಒಂದೇ ಚಿತ್ರವನ್ನು ನೋಡುವುದನ್ನು ಕಂಡು ರೋಸಿಹೋದ ಹೆಂಡತಿ ಒಂದು ದಿನ ದೊಡ್ಡ ಜಗಳ ತೆಗೆದರು. ಸಂಸಾರ ವಿಚ್ಛೇದನದ ಹಂತಕ್ಕೆ ಬಂತು. ಇದೇ ಮಾದರಿಯ ಇನ್ನೊಂದು ಜಗಳದ ಬಳಿಕ ಸುಶೀಲ್ ಸಿನೇಮಾ ನಿರ್ಮಾಪಕನಾಗುವ ಹುಚ್ಚು ಹೊತ್ತುಕೊಂಡು ಮುಂಬಯಿಯ ರೈಲು ಏರಿದರು.
ಚಿತ್ರ ನಿರ್ಮಾಣದ ತಾಂತ್ರಿಕತೆಯ ಎಬಿಸಿಡಿ ಗೊತ್ತಿಲ್ಲದೆ ಮುಂಬಯಿಯಲ್ಲಿ ಅಂಡೆಲೆಯುತ್ತಿದ್ದ ಸುಶೀಲ್‌ಗೆ ಯಾರೋ ಒಬ್ಬ ನಿರ್ಮಾಪಕ ಮೊದಲು ಟಿವಿ ಧಾರಾವಾಹಿ ನಿರ್ಮಿಸಿ ಅನುಭವ ಸಂಪಾದಿಸು ಎಂದ. ಹೀಗೆ ಟಿವಿ ಧಾರಾವಾಹಿ ನಿರ್ಮಿಸಲು ಹೋಗಿ ಕೈಯಲ್ಲಿದ್ದ ದುಡ್ಡೆಲ್ಲ ಖಾಲಿಯಾಗಿ ಸುಶೀಲ್ ಮಾನಸಿಕವಾಗಿ ಜರ್ಜರಿತರಾದರು. ಆರು ತಿಂಗಳಲ್ಲೇ ಅವರಿಗೆ ಮುಂಬಯಿ ಸಾಕುಬೇಕಾಯಿತು.
ಮರಳಿ ಹುಟ್ಟೂರಾದ ಮೋತಿಹಾರಿಗೆ ಬಂದ ಸುಶೀಲ್‌ಗೆ ಜೀವನ ಅರ್ಥವಾಗತೊಡಗಿತು. ಬದುಕಬೇಕಾದರೆ ಏನಾದರೂ ಮಾಡಬೇಕೆಂದು ನಿರ್ಧರಿಸಿ ಟ್ಯೂಷನ್ ಹೇಳುವುದಕ್ಕೆ ಪ್ರಾರಂಭಿಸಿದರು. ಜೊತೆಗೆ ಮಾನಸಿಕ ನೆಮ್ಮದಿಗಾಗಿ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ತೊಡಗಿಕೊಂಡರು. ಜೀವನ ನಿರ್ವಹಣೆಗಾಗಿ ಎರಡು ಎಮ್ಮೆಗಳನ್ನು ಖರೀದಿಸಿ ಅದರ ಹಾಲು ಮಾರುತ್ತಿದ್ದಾರೆ.
ಕೆಲ ಸಮಯದ ಹಿಂದೆ ಓರ್ವ ಪತ್ರಕರ್ತ ಸಂದರ್ಶನಕ್ಕಾಗಿ ಸುಶೀಲ್‌ಗೆ ಫೋನ್ ಮಾಡಿದ್ದರು. 5 ಕೋಟಿ ಎಂದೋ ಕರಗಿ ಹೋಗಿದೆ, ಈಗ ಹಾಲು ಮಾರಿ ಬದುಕುತ್ತಿದ್ದೇನೆ ಎಂದು ಸುಶೀಲ್ ಹೇಳಿದಾಗ ಪತ್ರಕರ್ತನಿಗೆ ಸಂದರ್ಶಿಸುವ ಉಮೇದು ಉಳಿಯಲಿಲ್ಲ. ಆದರೆ 5 ಕೋಟಿ ಗೆದ್ದವ ಹಾಲು ಮಾರಿ ಬದುಕುತ್ತಿರುವ ಸುದ್ದಿ ಈ ಪತ್ರಕರ್ತನಿಂದಾಗಿ ಕಾಳ್ಗಿಚ್ಚಿನಂತೆ ಹರಡಿತು. ಅನಂತರ ಜನರು ನೀಡುತ್ತಿದ್ದ ಸೆಲೆಬ್ರಿಟಿ ಸ್ಥಾನಮಾನಗಳು ನಿಂತು ಹೋದವು. ಈಗ ಯಾರೂ ಅವರನ್ನು ಕಾರ್ಯಕ್ರಮಗಳಿಗೆ, ಉದ್ಘಾಟನೆಗಳಿಗೆ ಕರೆಯುವುದಿಲ್ಲ. ಈಗ ಬದುಕು ನೆಮ್ಮದಿಯಿಂದ ನಡೆಯುತ್ತಿದೆ. ಕುಡಿತ, ಸಿಗರೇಟು ಬಿಟ್ಟಿದ್ದೇನೆ. ಜನರು ಗಮನಿಸದಿದ್ದರೂ ಮನಸಿಗೆ ಬೇಸರವಾಗುವುದಿಲ್ಲ ಎಂದು ಫೇಸ್ ಬುಕ್ ಪೋಸ್ಟ್ ಮುಗಿಸಿದ್ದಾರೆ ಸುಶೀಲ್ ಕುಮಾರ್.
ಉಮೇಶ್ ಕೋಟ್ಯಾನ್































