ಸೆಂಟ್ರಲ್ ಸಿನೆಮಾ ಥಿಯೇಟರ್ ಗೆ ಕೊನೆಮೊಳೆ ಹೊಡೆಯುವ ಹೊತ್ತಿನಲ್ಲಿ ನೆನಪುಗಳ ಕನವರಿಕೆ…

      ಒಂದು ಕಾಲದಲ್ಲಿ ಮಂಗಳೂರಿನಲ್ಲಿ 13 ಸಿನೆಮಾ ಮಂದಿರಗಳು ಇದ್ದವು. ಸಿನೆಮಾ ನೋಡುವುದಕ್ಕಾಗಿ ಕಾರ್ಕಳದಿಂದ ಮಂಗಳೂರಿಗೆ ಹೋಗಿ ಎರಡು, ಮೂರು ಸಿನೆಮಾ ನೋಡಿ ಬರುವ ಸಿನೆಮಾ ಹುಚ್ಚಿನ ಹುಡುಗರು ಇದ್ದರು. 1980ರಿಂದ ಆರಂಭವಾದ ಈ ಕ್ರೇಜ್ ಇತ್ತೀಚಿನವರೆಗೂ ಇತ್ತು.   ಜ್ಯೋತಿ ಕನ್ನಡ,ತುಳು ಸಿನೆಮಾಗಳಿಗೆ ಫೇಮಸ್. ಪ್ಲಾಟಿನಂ ಆ ಕಾಲದ ವೈಭವದ ಥಿಯೇಟರ್. ಮಲಯಾಳಂ, ಹಿಂದಿ ಸಿನೆಮಾ ಅಲ್ಲಿ ನೋಡಿದರೆ ಅದ್ಭುತ ಫೀಲ್. ರಮಾಕಾಂತಿ ಮಂದಿರದಲ್ಲಿ ಹೊಡೆದಾಟದ ಸಿನೆಮಾಗಳು ಜನಪ್ರಿಯ.  ರೂಪವಾಣಿ ಸಿನೆಮಾ ಮಂದಿರದಲ್ಲಿ ಬಂಧನ, ಸಾಗರ ಸಂಗಮ, ಮಲ್ಲ ಮೊದಲಾದ ಕ್ಲಾಸ್ ಸಿನೆಮಾಗಳ ಮೆರವಣಿಗೆ. ನ್ಯೂ ಚಿತ್ರ ಇಂಗ್ಲಿಷ್ ಸಿನೆಮಾಗಳ ಸ್ವರ್ಗ. ದ ಲಾಸ್ಟ್‌ ಎಂಪರರ್‌,  ಟೈಟಾನಿಕ್ ಮೊದಲಾದ ಸಿನೆಮಾಗಳು ಮಿಂಚಿದ್ದು ಅಲ್ಲೇ. ಪ್ರಭಾತ್ ಮತ್ತು ಸುಚಿತ್ರ ಒಂದೇ ಅಂಗಳದ ಮಂದಿರಗಳು. ಧಾರಾವಾಹಿ ಆಧಾರಿತ ಕ್ಲಾಸ್ ಸಿನೆಮಾಗಳು ಇಲ್ಲಿ ಮಿಂಚಿಂಗ್! ಬಾಲಾಜಿ ( ಮುಂದೆ ಶ್ರೀನಿವಾಸ್ ಆಯಿತು) ಪಡ್ಡೆ ಹುಡುಗರ ವಯಸ್ಕರ ಸಿನೆಮಾಗಳಿಗೆ ಫೇಮಸ್!

       ಮಂಗಳೂರಿನ ಈ ಸಿನೆಮಾ ಮಂದಿರಗಳ ಮುಂದೆ ಕ್ಯೂ ನಿಂತು ಟಿಕೆಟ್ ಗಿಟ್ಟಿಸಿಕೊಂಡು ಒಳಗೆ ಕೂತರೆ ಎರಡೂವರೆ ಘಂಟೆ ಬೇರೆ ಜಗತ್ತು ಬೇಡ. ಹೆಚ್ಚಿನವರಿಗೆ ಅವುಗಳು ನೋವು ಮರೆಸುವ ತಾಣಗಳು. ಕಾಲೇಜು ಮಕ್ಕಳ ನಡುವೆ ಕೂತು ವಿಸಿಲ್, ಚಪ್ಪಾಳೆ ಆಸ್ವಾದಿಸುತ್ತಾ ಸಿನೆಮಾ ನೋಡುವ ಫೀಲ್ ಇದೆಯಲ್ಲ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಟಿವಿ ಸಿನೆಮಾದಲ್ಲಿ ಸಿಗದು.

       OTT platform ಬಂದರೂ ಸಿನೆಮಾ ಮಂದಿರಗಳಿಗೆ ಹೋಗಿಯೇ ಸಿನೆಮಾ ನೋಡಲು ಬಯಸುವ ಪ್ರೇಕ್ಷಕರ ಸಂಖ್ಯೆ ತುಂಬಾ ದೊಡ್ಡದಿದೆ. ಸಿನೆಮಾ ಒಂದು ಸಂಸ್ಕೃತಿಯ ಭಾಗ ಎಂದು ನನ್ನ ನಂಬಿಕೆ. ಪ್ರತೀ ವಾರ ಯಾವ ಸಿನೆಮಾ ಬಿಡುಗಡೆ? ಯಾರು ಹೀರೊ, ಯಾರು ಹೀರೋಯಿನ್, ಯಾರ ನಿರ್ದೇಶನ? ಅದರ ಬಗ್ಗೆ ಕುತೂಹಲ, ಚರ್ಚೆ, ವಿಮರ್ಶೆಗಳು ಕಾವು ಕೊಡುತ್ತಿದ್ದವು. ಮಲ್ಟಿಪ್ಲೆಕ್ಸ್ ಬಂದ ನಂತರವೂ ನಾನು ಮೇಲೆ ಹೆಸರಿಸಿದ ಸಿನೆಮಾ ಮಂದಿರಗಳು ನಿತ್ಯ ಸುಮಂಗಲಿಯರು! ಅವುಗಳ ಆಕರ್ಷಣೆ ಕಡಿಮೆ ಆಗಲೇ ಇಲ್ಲ.      ಬರೇ ಮನರಂಜನೆಗಾಗಿ, ಟೈಮ್ ಪಾಸ್ ಮಾಡಲು ನಾನು ಸಿನೆಮಾ ನೋಡುವುದಿಲ್ಲ. ಪ್ರತೀ ಸಿನೆಮಾ ಕೂಡ ನನಗೊಂದು ಅನುಭವ, ಶಿಕ್ಷಣ ಮತ್ತು ತರಬೇತಿ! ಮಂಗಳೂರಿನ ಜ್ಯೋತಿ ಸಿನೆಮಾ ಮಂದಿರದಲ್ಲಿ ನಾನು ಮೊದಲು ನೋಡಿದ ತುಳು ಸಿನೆಮಾ ಬಯ್ಯ ಮಲ್ಲಿಗೆ, ಪ್ಲಾಟಿನಂ ಥಿಯೇಟರಿನಲ್ಲಿ ನೋಡಿದ ಭಕ್ತ ಕುಂಬಾರ, ಶೋಲೆ, ರೂಪವಾಣಿಯಲ್ಲಿ ನೋಡಿದ ಸಾಗರ ಸಂಗಮ್, ಬಂಧನ, ಮಲ್ಲ….ಹೀಗೆ ಸಾಗುತ್ತದೆ ನೆನಪುಗಳ ಮೆರವಣಿಗೆ.‌

      ಇಷ್ಟೆಲ್ಲ ಬರೆಯಲು ಕಾರಣ ಏನೆಂದರೆ ಮಂಗಳೂರಿನ ಇನ್ನೊಂದು ಪ್ರಮುಖ ಚಿತ್ರಮಂದಿಕ್ಕೆ  ಇದೀಗ ಕೊನೆ ಮೊಳೆ ಹೊಡೆದ ಸುದ್ದಿ ಬಂದಿದೆ. ನಗರದ ಹಂಪನಕಟ್ಟೆಗೆ ಅತ್ಯಂತ ಹತ್ತಿರವಿದ್ದ ಸೆಂಟ್ರಲ್ ಸಿನೆಮಾ ಥಿಯೇಟರ್ ಅನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಕೆಡಹುವ ಕಾರ್ಯ ಸದ್ಯಕ್ಕೆ ಆರಂಭವಾಗಲಿದೆ. ಸುಮಾರು ಆರು ತಿಂಗಳ ಹಿಂದೆಯೇ ಬಾಗಿಲು ಮುಚ್ಚಲಾಗಿತ್ತು. ಅದು  ಈಗ ಅಧಿಕೃತವಾಗಿ ಕೊನೆಯ ಉಸಿರು ಎಳೆಯಲಾರಂಭಿಸಿದೆ.

            ಲಾಕ್ ಡೌನ್ ಅವಧಿಯ ನಂತರ ಒಳ್ಳೆಯ ಸಿನೆಮಾ ನೋಡಲು ಕಾಯುತ್ತಿದ್ದ ಪ್ರೇಕ್ಷಕರ ಕನಸುಗಳಿಗೆ ಇನ್ನೊಂದು ಕಲ್ಲು ಬಿತ್ತು. ಕನ್ನಡದ ಅತ್ಯುತ್ತಮ ಸಿನೆಮಾ ಓಂ, ಮುಂಗಾರು ಮಳೆ ಶತದಿನ ಕಂಡ ಥಿಯೇಟರ್ ಅದು! ಓಂ ಸಿನೆಮಾ ಮೊದಲ ಬಾರಿ ಬಿಡುಗಡೆ ಆದಾಗ ನೂರು ದಿನ ಓಡಿತ್ತು. ಆಗ ಶತದಿನದ ಸಂಭ್ರಮಕ್ಕೆ ವರನಟ ಡಾಕ್ಟರ್ ರಾಜಕುಮಾರ್ ಮಂಗಳೂರಿಗೆ ಬಂದಿದ್ದರು.

          ಅದೇ ಸಿನೆಮಾ ಮಂದಿರದಲ್ಲಿ ಓಂ ಸಿನೆಮಾ ಮತ್ತೆ ಮತ್ತೆ ಬಿಡುಗಡೆ ಆಗಿತ್ತು. ಥಿಯೇಟರ್ ಮುಂದೆ ದೊಡ್ಡ ದೊಡ್ಡ ನಕ್ಷತ್ರ ನಿಲ್ಲಿಸಿದ್ದು, ಟಿಕೆಟ್ ಸಿಗದೆ ಜಗಳ ಮಾಡಿದ್ದು ಇನ್ನೂ ಮನದಲ್ಲಿ ಹಸಿರಾಗಿದೆ. ಮರ್ಡರ್, ಡರ್ಟಿ ಪಿಕ್ಚರ್….ಮೊದಲಾದ ಹತ್ತಾರು ಹಿಂದಿ ಸಿನೆಮಾಗಳನ್ನು ನಾನು ನೋಡಿದ್ದು ಅದೇ ಮಂದಿರದಲ್ಲಿ.

          ಈ ಥಿಯೇಟರ್ ಕೇಂದ್ರ ಬಸ್ಸು ನಿಲ್ದಾಣ, ಪುರಭವನ, ಮಾರ್ಕೆಟ್ ಎಲ್ಲಾದಕ್ಕೂ ಹತ್ತಿರವಿದ್ದು ಉತ್ತಮ ಆಸನ ವ್ಯವಸ್ಥೆ, ದೊಡ್ಡ ಪರದೆ, ಶ್ರೇಷ್ಟ ಸೌಂಡ್ ಎಫೆಕ್ಟ್ ಒಳಗೊಂಡಿತ್ತು.  ದೂರದ ಊರಿನವರು ರಾತ್ರಿ 7-10 ಶೋ ನೋಡಿ ಮತ್ತೆ ಬಸ್ಸು ಹಿಡಿಯಲು ಅನುಕೂಲಕರ ಆಗಿತ್ತು. ಮಾರ್ಕೆಟಿಗೆ ಬಂದವರು, ಆಸ್ಪತ್ರೆಗೆ  ರೋಗಿಯನ್ನು ನೋಡಲು ಬಂದವರು, ಪುರಭವನದಲ್ಲಿ ನಾಟಕ ಮುಗಿಸಿ ಊರಿಗೆ ಹೊರಟವರು ಎಲ್ಲರಿಗೂ ಹತ್ತಿರದ ಮತ್ತು ಅನುಕೂಲಕರವಾದ ಥಿಯೇಟರ್ ಅದು. ಪಾರ್ಕಿಂಗ್ ವ್ಯವಸ್ಥೆ ಕೂಡ ಚೆನ್ನಾಗಿತ್ತು.

          ಒಳ್ಳೆಯ ಸಿನೆಮಾ ನೋಡಲು ಬರುವ ಕುಟುಂಬಗಳು, ಕಾಲೇಜಿಗೆ ಚಕ್ಕರ್ ಹೊಡೆದು ಕೈ ಕೈ ಹಿಡಿದುಕೊಂಡು ಬರುವ ಯುವಕ ಯುವತಿಯರು ಎಲ್ಲರಿಗೂ ಅದು ಮನೋರಂಜನೆಯ ಅದ್ಭುತವಾದ ತಾಣ ಆಗಿತ್ತು. ಅಂತಹ ಸೆಂಟ್ರಲ್ ಸಿನೆಮಾ ಮಂದಿರ ಇದೀಗ ಇತಿಹಾಸದ ಭಾಗವಾಗಿ ಹೋಯಿತು! ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಆಗಲಿದೆ ಎನ್ನುವುದು ಬಿಸಿ ಸುದ್ದಿ. ಅಲ್ಲಿಗೆ ಮಂಗಳೂರಿನ  ಇನ್ನೊಂದು ಪ್ರಮುಖ ಸಿನೆಮಾ ಮಂದಿರ ಬಾಗಿಲು ಮುಚ್ಚಿದ್ದು ಮಾತ್ರ ಸತ್ಯ.

ರಾಜೇಂದ್ರ ಭಟ್‌ ಕೆ.































































































error: Content is protected !!
Scroll to Top