ಒಂದಕ್ಕಿಂತ ಹೆಚ್ಚು ಪಾನ್‌  ಕಾರ್ಡ್‌ ಹೊಂದಿದ್ದೀರಾ? : ನಿಮ್ಮ ಮೇಲಿದೆ ಐಟಿ ಕಣ್ಣು

0

ದಿಲ್ಲಿ, ಆ.20: ಒಂದಕ್ಕಿಂತ ಹೆಚ್ಚು ಪಾನ್‌ ಕಾರ್ಡ್ ಗಳನ್ನು ಬಳಸಿ ದೊಡ್ಡ ಮೊತ್ತದ ವ್ಯವಹಾರಗಳನ್ನು ನಡೆಸಿದವರನ್ನು ಬಲೆಗೆ ಕೆಡವಲು ಆದಾಯ ಕರ ಇಲಾಖೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದೊಂದಿಗೆ ತಯಾರಾಗಿದೆ. ಸುಮಾರು 18  ಕೋಟಿ ಪಾನ್‌ ಕಾರ್ಡ್‌ಗಳು ಇನ್ನೂ ಆಧಾರ್‌ಗೆ ಲಿಂಕ್‌ ಆಗಿಲ್ಲ. ಕಳೆದ ಮಾರ್ಚ್‌ 31  ಲಿಂಕ್‌ ಮಾಡಲು ಕೊನೆಯ ದಿನಾಂಕವಾಗಿದ್ದರೂ ಬಳಿಕ ಅದನ್ನು ಜೂ.30ರ ತನಕ ವಿಸ್ತರಿಸಲಾಗಿತ್ತು. ಆದಾಯ ಕರ ಇಲಾಖೆಯ ಕಾರ್ಯಾಚರಣೆಯಿಂದ ಈ ಎಲ್ಲ ಪಾನ್‌  ಕಾರ್ಡ್‌ಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿದೆ.

ಐಷರಾಮಿ ಜೀವನಕ್ಕಾಗಿ ದೊಡ್ಡ ಮೊತ್ತ ಖರ್ಚು ಮಾಡುವ ಆದರೆ ತೆರಿಗೆ ತಪ್ಪಿಸುತ್ತಿರುವ ವ್ಯಕ್ತಿಗಳ ಮೇಲೂ ಆದಾಯ ಕರ ಇಲಾಖೆಯ ಕಣ್ಣು ಇದೆ.ಬ್ಯಾಂಕ್‌, ಇತರ ಹಣಕಾಸು ಸಂಸ್ಥೆಗಳು, ಮ್ಯೂಚುವಲ್‌  ಫಂಡ್‌, ಕ್ರೆಡಿಟ್‌  ಕಾರ್ಡ್‌ ಹಾಗೂ ಇನ್ನಿತರ ಮೂಲಗಳಿಂದ ಇಲಾಖೆ ಜನರ ಖರ್ಚಿನ ಮಾಹಿತಿ ಪಡೆದುಕೊಂಡಿದೆ.

130 ಕೋಟಿ ಜನರಲ್ಲಿ ತೆರಿಗೆ ಪಾವತಿಸುವವರು 15 ಕೋಟಿ ಮಂದಿ ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರೂ ಹಿಂದೊಮ್ಮೆ  ಈ ವಿಚಾರವನ್ನು ಉಲ್ಲೇಖಿಸಿದ್ದರು. ಹಾಗೆಂದು ಉಳಿದವರು ತೆರಿಗೆ ಪಾವತಿಸುವಷ್ಟು ಆದಾಯ ಹೊಂದಿಲ್ಲ ಎಂದು ಅಲ್ಲ. ಆದರೆ ಅವರು ತೆರಿಗೆ  ತಪ್ಪಿಸಲು ನಾನಾ ದಾರಿಯನ್ನು ಕಂಡುಕೊಂಡಿರುತ್ತಾರೆ. ಅದರಲ್ಲಿ ಒಂದಕ್ಕಿಂತ ಹೆಚ್ಚು ಪಾನ್‌  ಕಾರ್ಡ್‌ ಹೊಂದಿರುವುದೂ ಒಂದು. ಪಾನ್‌  ಕಾರ್ಡ್‌ ಅನ್ನು ಆಧಾರ್‌ಗೆ  ಲಿಂಕ್‌  ಮಾಡಿದರೆ ಇಂಥವರು ಸಿಕ್ಕಿ ಬೀಳುತ್ತಾರೆ.

 50.95 ಕೋಟಿ ಪಾನ್‌ ಕಾರ್ಡ್‌

ದೇಶದಲ್ಲಿ 50.95 ಕೋಟಿ ಪಾನ್‌ ಕಾರ್ಡ್‌ಧಾರರಿದ್ದಾರೆ.ಈ ಪೈಕಿ 6.48 ಮಂದಿ ಮಾತ್ರ ಆದಾಯ ತೆರಿಗೆ ರಿಟರ್ನ್‌ ಫೈಲ್‌  ಮಾಡುತ್ತಾರೆ. ಇವರಲ್ಲಿ ನಿಜವಾಗಿ ತೆರಿಗೆ ಪಾವತಿಸುವವರು 1.5 ಕೋಟಿ ಮಾತ್ರ.

ಆಧಾರ್‌ ಗೆ  ಪಾನ್‌  ಲಿಂಕ್‌ ಆಗಿಲ್ಲ ಎಂದರೆ ಆಂಥವರು ಒಂದಕ್ಕಿಂತ ಹೆಚ್ಚು ಪಾನ್‌  ಕಾರ್ಡ್‌ ಹೊಂದಿದ್ದಾರೆ ಎಂದು ಅರ್ಥ. ಆಧಾರ್‌‌ಗೆ ಲಿಂಕ್‌ ಆದ ಬಳಿಕ ಇನ್ನೊಂದು ಪಾನ್‌  ಪಡೆದುಕೊಳ್ಳುವುದು ಅಸಾಧ್ಯ. ಆಧಾರ್‌ಗೆ  ಪಾನ್‌  ಕಾರ್ಡ್‌  ಲಿಂಕ್‌  ಆದರೆ ತೆರಿಗೆ ತಪ್ಪಿಸುವವರ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ ಎಂದಿದ್ದಾರೆ ಓರ್ವ ತೆರಿಗೆ ಅಧಿಕಾರಿ.

ಯಾರ ಮೇಲೆ ಕಣ್ಣು?

ವಾರ್ಷಿಕ 1 ಲ.ರೂ.ಮೇಲ್ಪಟ್ಟು ಶಿಕ್ಷಣ ಶುಲ್ಕ ಪಾವತಿಸುವವರು, 1 ಲ.ರೂ. ಮೇಲ್ಪಟ್ಟು ವಿದ್ಯುತ್‌ ಬಿಲ್‌ ಪಾವತಿಸುವವರು, ವಿಮಾನದ ಬಿಸಿನೆಸ್‌ ಕ್ಲಾಸಿನಲ್ಲಿ ದೇಶದೊಳಗೆ  ಪ್ರಯಾಣಿಸುವವರು, 1 ಲ.ರೂ. ಮೇಲ್ಪಟ್ಟು ಚಿನ್ನಾಭರಣ ಖರೀದಿಸುವವರು, ವಾರ್ಷಿಕ 20,000 ರೂ.  ಮೇಲ್ಪಟ್ಟು ಆಸ್ತಿ ತೆರಿಗೆ ಪಾವತಿಸುವವರು, 50,000 ರೂ. ಜೀವ ವಿಮೆ ಕಂತು ಪಾವತಿಸುವವರು ಮತ್ತು 20,000  ರೂ. ಆರೋಗ್ಯ ವಿಮೆ ಕಂತು ಪಾವತಿಸುವವರ ಮೇಲಿದೆ ಐಟಿ ಇಲಾಖೆಯ ಕಣ್ಣು.---
Previous articleಐಎಂಎ ರಾಜ್ಯ| ಘಟಕದ ಅಧ್ಯಕ್ಷರಾಗಿ ಡಾ. ಸುರೇಶ್‌ ಕುಡ್ವ ಆಯ್ಕೆ
Next articleಕಾರ್ಕಳ : ಗ್ರಾ.ಪಂ. ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿ ಪ್ರಕಟ

LEAVE A REPLY

Please enter your comment!
Please enter your name here