
ದಿಲ್ಲಿ, ಆ. 14: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಮತ್ತು ನ್ಯಾಯಾಯದ ವಿರುದ್ಧ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದ ವಕೀಲ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಪ್ರಶಾಂತ್ ಭೂಷಣ್ ಜೂ.27 ಮತ್ತು ಜೂ.29ರಂದು ಬೆನ್ನುಬೆನ್ನಿಗೆ ಮುಖ್ಯ ನ್ಯಾಯಾಧೀಶ ಹಾಗೂ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಆಕ್ಷಏಪಾರ್ಹ ಟ್ವೀಟ್ ಗಳನ್ನು ಮಾಡಿದ್ದರು. ಜು.22ರಂದು ನ್ಯಾಯಾಲಯ ಪ್ರಶಾಂತ್ ಭೂಷಣ್‌ಗೆ ನೊಟೀಸ್ ಜಾರಿ ಮಾಡಿತ್ತು.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಭೂಷಣ್ ಗೆ ನೀಡಬೇಕಾದ ಶಿಕ್ಷೆಯ ಪ್ರಮಾಣವನ್ನು ಆ. 20 ರಂದು ನಿರ್ಧರಿಸಲಿದೆ.
“ತುರ್ತು ಪರಿಸ್ಥಿತಿ ಹೇರದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂದು ಕಳೆದ ಆರು ವರ್ಷಗಳನ್ನು ಇತಿಹಾಸಕಾರರು ಹಿಂತಿರುಗಿ ನೋಡಿದ ತಿಳಿಯಬಹುದು. ಆ ನಾಶದಲ್ಲಿ ಸುಪ್ರೀಂಕೋರ್ಟ್ ನ ಪಾತ್ರವನ್ನು ಸ್ಪಷ್ಟವಾಗಿ ನೋಡಬಹುದು. ಅದರಲ್ಲೂ ಕಳೆದ ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಇದರಲ್ಲಿ ಅತ್ಯಂತ ದೊಡ್ಡದು” ಎಂದು ಪ್ರಶಾಂತ್ ಭೂಷಣ್ ಟ್ವಿಟ್ ಮಾಡಿದ್ದರು.
ಮತ್ತೊಂದು ಟ್ವೀಟ್ ನಲ್ಲಿ, “ನಾಗ್ಪುರದ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್ ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ಕೊರೋನಾ ಲಾಕ್ ಡೌನ್ ಎಂದು ಹೇಳಿಕೊಂಡು ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ರಜೆ ಹಾಕಿ ಮುಖ್ಯ ನ್ಯಾಯಮೂರ್ತಿಗಳು ಬೈಕ್ ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ” ಎಂದು ಬರೆದಿದ್ದರು.ಈ ಎರಡು ಟ್ವಿಟ್‌ಗಳು ಪ್ರಶಾಂತ್ ಭೂಷಣ್ ಅವರನ್ನು ಕಟಕಟೆಗೆ ಎಳೆದು ತಂದಿವೆ.