
ಭೋಪಾಲ,ಆ. 14: ಕೊರೊನಾ ಹಾವಳಿಯ ಕಾಲದಲ್ಲಿ ಎಲ್ಲರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳಿಗಾಗಿ ಮುಗಿಬೀಳುತ್ತಿದ್ದಾರೆ. ಹೀಗಾಗಿ ರೋಗ ನಿರೋಧಕ ಶಕ್ತಿ ವರ್ಧಿಸುವ ಆಹಾರ ವಸ್ತುಗಳು, ಕಷಾಯ, ಮದ್ದುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ.ಅದರಲ್ಲೂ ಮಹಿಳೆಯರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಿಗುವ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ.ಇದು ಹೊಟ್ಟೆಗೆ ತಿಂದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮಾತಾಯಿತು. ಆದರೆ ಇದೀಗ ರೋಗ ನಿರೋಧಕ ಶಕ್ತಿಯನ್ನು ಮೈಗೆ ಧರಿಸಿಕೊಳ್ಳಬಹುದು. ಹೌದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೀರೆಗಳು ಮಾರುಕಟ್ಟೆಗೆ ಬಂದಿವೆ.
“ಆಯರ್ ವಸ್ತ್ರ” ಎಂಬ ಈ ಹೆಸರಿನ ಸೀರೆಗಳು ಮಧ್ಯಪ್ರದೇಶದಲ್ಲಿ ಭಾರಿ ಬೇಡಿಕೆ ಗಳಿಸಿಕೊಂಡಿವೆ.
ಇದು ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಪರಿಕಲ್ಪನೆಯಿಂದ ಪ್ರೇರಿತವಾದ ಯೋಜನೆ.
ಸೀರೆಯಿಂದ ಮಹಿಳೆಯರ ರೋಗ ನಿರೋಧಕ ಶಕ್ತಿ ಹೆಚ್ಚಬಹುದು. ಗಂಡಸರು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗುವುದು ಸಹಜ. ಗಂಡಸರಿಗೂ ಕುರ್ತಾ-ಪೈಜಾಮದಂಥ ಉಡುಪುಗಳು ಇವೆ.
ಹೀಗಿದೆ ರೋಗ ನಿರೋಧಕ ಸೀರೆ
ಮಧ್ಯ ಪ್ರದೇಶ ಕೈಮಗ್ಗ ಮತ್ತು ಗುಡಿ ಕೈಗಾರಿಕೆ ನಿಗಮ ಈ ಸೀರೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.
ಸೀರೆಗಳನ್ನು ಭಾರತದಲ್ಲಿ ಪುರಾತನ ಕಾಲದಲ್ಲಿ ರೂಥಿಯಲ್ಲಿದ್ದ ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥಗಳಿಂದ ಸಂಸ್ಕರಿಸಲಾಗಿದೆ. ಈ ಸೀರೆಯನ್ನು ಧರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಿದೆ ನಿಗಮ.
ಭೋಪಾಲದ ಓರ್ವ ಕೈಮಗ್ಗ ಪರಿಣತರಿಗೆ ಸೀರೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ.
ರೋಗ ನಿರೋಧಕ ಶಕ್ತಿ ವರ್ಧಿಸುವ ಸೀರೆಯನ್ನು ತಯಾರಿಸುವುದು ಸುಲಭದ ಕೆಲಸವಲ್ಲ. ಹಲವು ಹಂತದ ಸಂಸ್ಕರಣಾ ಪ್ರಕ್ರಿಯೆಯನ್ನು ದಾಟಿ ಬರಬೇಕು ಈ ಸೀರೆ.
ಲವಂಗ, ಏಲಕ್ಕಿ, ಚಕ್ರಫಲ, ಜಾಯಿಪತ್ರೆ,ಕಾಳುಮೆಣಸು,ದಾಲ್ಚಿನ್ನಿ, ಜೀರಿಗೆ ಇತ್ಯಾದಿ ಸಂಬಾರ ವಸ್ತುಗಳನ್ನು ಈ ಸೀರೆ ತಯಾರಿಯಲ್ಲಿ ಉಪಯೋಗಿಸಲಾಗಿದೆ. ಈ ಎಲ್ಲ ವಸ್ತುಗಳನ್ನು ಜಜ್ಜಿ 48 ತಾಸು ನೀರಿನಲ್ಲಿಡಬೇಕು. ಬಳಿಕ ಈ ನೀರನ್ನು ಕುದಿಸಿ (ಫರ್ನೇಸ್) ಅದರ ಆವಿಯಲ್ಲಿ ಸೀರೆಗಳನ್ನು ಸಂಸ್ಕರಿಸಲಾಗುತ್ತದೆ. ಸೀರೆ ಮಾತ್ರವಲ್ಲದೆ ಮಾಸ್ಕ್ ಮತ್ತಿತರ ಉಡುಪುಗಳನ್ನೂ ಈ ರೀತಿ ತಯಾರಿಸಬಹುದು.ಒಂದು ಸೀರೆ ತಯಾರಾಗಲು 5-6 ದಿನ ಹಿಡಿಯುತ್ತದೆ.
ಹಾಗೆಂದು ಇದು ಹೊಸ ಆವಿಷ್ಕಾರವಲ್ಲ. ಭಾರತದಲ್ಲಿ ಶತಮಾನಗಳ ಹಿಂದೆ ಆಯುರ್ವೇದ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಈ ಮಾದರಿಯ ವಸ್ತ್ರಗಳು ತಯಾರಾಗುತ್ತಿದ್ದವು.ಹಿಂದಿನವರ ಸೋಂಕು ತಡೆಯುವ ವಿಧಾನ ಇದಾಗಿತ್ತು ಎನ್ನುತ್ತಾರೆ ಆಯುರ್ ವಸ್ತ್ರ ತಯಾರಿಯ ಹಿಂದೆ ಇರುವ ವಿನೋದ್ ಮಾಳೆವಾರ್.
ಸೀರೆ ಸಂಸ್ಕರಿಸುವ ದ್ರಾವಣವನ್ನು ಸಂಶೋಧಿಸಲು ಎರಡು ತಿಂಗಳು ಹಿಡಿದಿದೆಯಂತೆ.
ಎಷ್ಟು ಸಮಯ ಈ ಸೀರೆಯಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಎಂಬ ಪ್ರಶ್ನೆ ಎದುರಾಗಬಹುದು.
4-5 ಒಗೆತದ ತನಕ ಆಯುರ್ ವಸ್ತ್ರ ಸೀರೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅಂದ ಹಾಗೆ ಸೀರೆಯ ಬೆಲೆ 3,000 ರೂ.ನಿಂದ ಶುರುವಾಗುತ್ತದೆ.
ಪ್ರಸ್ತುತ ಭೋಪಾಲ ಮತ್ತು ಇಂದೊರ್ನಲ್ಲಿ ಮಾತ್ರ ಲಭ್ಯವಿದೆ. ಸದ್ಯದಲ್ಲೇ ದೇಶಾದ್ಯಂತ 36 ಮಳಿಗೆಗಳಲ್ಲಿ ಲಭ್ಯವಾಗಲಿದೆ.
ಕೊರೊನಾ ವೈರಸ್ ಎಂತೆಂಥ ಆವಿಷ್ಕಾರಗಳಿಗೆಲ್ಲ ಕಾರಣವಾಯಿತು ನೋಡಿ.