ಪಾಟ್ನಾ, ಜು. 29: ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಹಲವು ಗಂಭೀರವಾದ ಆರೋಪಗಳನ್ನು ಹೊರಿಸಿದ್ದಾರೆ.
ಪಾಟ್ನಾದ ರಾಜೀವ್ ನಗರ್ ಪೊಲೀಸ್ ಠಾಣೆಯಲ್ಲಿ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರು ಸೇರಿ ಆರು ಮಂದಿಯ ವಿರುದ್ಧ ಸುಶಾಂತ್ ತಂದೆ ಕೃಷ್ಣ ಕುಮಾರ್ ಸಿಂಗ್ ದೂರು ದಾಖಲಿಸಿದ್ದಾರೆ.
ಮಗನ ಸಾವಿಗೆ ರಿಯಾ ಮತ್ತು ಆಕೆಯ ಕುಟುಂಬದವರೇ ಕಾರಣ.ಮಗನನ್ನು ಅವರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕಂಗಾಲುಗೊಳಿಸಿದ್ದರು. ಆಪ್ತ ಸಹಾಯಕಿ ಆತುಹತ್ಯೆ ಪ್ರಕರಣದಲ್ಲಿ ಸಿಲುಕಿಸಿ ಹಾಕುವುದಾಗಿ ಬೆದರಿಕೆಯೊಡ್ಡಿ ಬ್ಲಾಕ್ ಮೈಲ್ ಮಾಡಿದ್ದಾರೆಂದು ಕೃಷ್ಣ ಕುಮಾರ್ ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ. ಸುಶಾಂತ್ ಆಪ್ತ ಸಹಾಯಕಿ ದಿಶಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ ರಿಯಾ ಕೋಟಿಗಟ್ಟಲೆ ರೂಪಾಯಿ ಲಪಟಾಯಿಸಿದ್ದಾರೆ. ಬ್ಯಾಂಕ್ ಖಾತೆಯ ಪಾಸ್ಬುಕ್ , ಪಿನ್ ನಂಬರ್ ಇತ್ಯಾದಿಗಳನ್ನು ತಾವೇ ಹೊಂದಿದ್ದರು. ಸುಶಾಂತ್ ಏಳಿಗೆಯನ್ನು ಕಂಡು ಅವರಿಂದ ಹಣ ಲಪಟಾಯಿಸಲೆಂದೇ ಕಳೆದ ವರ್ಷ ಸ್ನೇಹ ಮಾಡಿದ್ದರು ಎಂಬ ಆರೋಪವನ್ನು ಮಾಡಿದ್ದಾರೆ. ಸುಶಾಂತ್ ಖಾತೆಯಲ್ಲಿದ್ದ 15 ಕೋ.ರೂ. ನಿಗೂಢವಾಗಿ ವರ್ಗಾವಣೆಯಾಗಿದೆ. ಈ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.