ಶ್ರಮಿಕ…

ಮುಂಬಯಿನನ್ ತಾಯಿ…

ನೀ ಗೆಲ್ಲಬೇಕೆಂದು

ನಾ ನಿಂತೆ ಒಳಗೆ.

ದೂರ ದೂರದವರೆಗೆ

ಯಾರೂ ಇಲ್ಲ ಹೊರಗೆ.

ಗಲ್ಲಿಗಲ್ಲಿಗಳಲ್ಲಿ ಮೌನ ಮಲಗಿದೆ

ಮಣ್ಣು ಒಣಗಿದೆ.

ನನ್ನೆದೆ ಗೂಡು ಒದ್ದೆಯಾಗ್ತಿದೆ

ನಿನ್ನ ಬಿಟ್ಟು ಹೋಗೊಕಾಗಲ್ಲ

ಹೋದ್ರೆ ಹೋದಲ್ಲಿ

ಬದುಕೋಕಾಗಲ್ಲ.

ನನ್ನ ದಿನ ನನ್ನ ರಾತ್ರಿ

ನನ್ನ ಸೋಲು ನನ್ನ ಗೆಲುವು

ಎಲ್ಲವೂ ನೀನೆ…

ನೀ ಯಾವತ್ತೂ ಹೀಗೆ

ಮನೆಬಾಗಿಲು ಮುಚ್ಕೊಂಡು

ಮೂಕಿಯಾಗಿದ್ದಿಲ್ಲ.

ಅಂಗಾಂಗ ಸುಟ್ಟುಕೊಂಡಾಗ್ಲೂ

ಮಳೆನೀರು ಮುಳಗಿಸಿದಾಗ್ಲೂ

ಭಯ ಗೆದ್ದಿಲ್ಲ…

ಇದೀಗ ಏನಾಯ್ತೋ ತಾಯಿ

ಕಾಣದ ವೈರಿಗೆ

ಎಷ್ಟೊಂದು ಸೊರಗಿದೆ.

ಹಳಿತಪ್ಪಿದೆ ನೋಡು ಬದುಕಬಂಡಿ

ಸ್ವಪ್ನನಗರಿಯಲ್ಲೀಗ

ಬದುಕು ಘಮಘಮಿಸುವುದ

ಮರೆತಿದೆ.

ಬರಿಗಾಲಲಿ ಬರಿಕಿಸೆಯಲಿ

ಬರಿಹೊಟ್ಟೆಗೆ ಕೈಯನಿಟ್ಟು

ನೆತ್ತಿಮೇಲೆರಡು ಪ್ಯಾಂಟು ಶರ್ಟು

ರಾಶಿ ಬಿಸಿಲ ಸೀಳಿ

ಕಾಲನ್ನೆತ್ತಿ ಹಾಕುತ

ಸಾಗ್ತೇನೆ ನಾನು

ಹೊಸ ಕನಸುಗಳ ನೇಯಲು

                ಡಾ. ಜಿ.ಪಿ. ಕುಸುಮ, ಮುಂಬಯಿ

Latest Articles

error: Content is protected !!