ದಿಲ್ಲಿ: ಸರಕಾರದ ಸರ್ವ ಪ್ರಯತ್ನಗಳ ಹೊರತಾಗಿಯೂ ಕೊರೊನಾ ವೈರಸ್ ಪ್ರಸರಣ ತೀವ್ರಗೊಂಡಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11 ಲಕ್ಷಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರಿದ್ದು ಭಾನುವಾರ ಒಂದೇ ದಿನ 9 ಸಾವಿರದ 518 ಮಂದಿಗೆ ಸೋಂಕು ತಗುಲಿದೆ. ಇಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷದ 10 ಸಾವಿರದ 455ಕ್ಕೇರಿದೆ. ತಮಿಳು ನಾಡಿನಲ್ಲಿ ನಿನ್ನೆ ಒಂದೇ ದಿನ 4 ಸಾವಿರದ 979 ಮಂದಿಗೆ ಸೋಂಕು ತಗುಲಿದೆ. ಇದುವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1.70 ಲಕ್ಷ ದಾಟಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.
ನಿನ್ನೆಯವರೆಗೆ ದೇಶದಲ್ಲಿ 1.40 ಕೋಟಿ ಮಂದಿಗೆ ಸೋಂಕಿನ ಪರೀಕ್ಷೆ ಮಾಡಿಸಲಾಗಿದೆ. ಅವರಲ್ಲಿ ನಿನ್ನೆ ಒಂದೇ ದಿನ 2.56 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿ 4,120 ಹೊಸ ಪ್ರಕರಣಗಳು ಪತ್ತೆಯಾಗಿದ್ದು 91 ಮಂದಿ ಮೃತಪಟ್ಟು ಒಟ್ಟು ಸಾವಿನ ಸಂಖ್ಯೆ 1,331ಕ್ಕೇರಿದೆ. ಒಟ್ಟಾರೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 11 ಲಕ್ಷ ದಾಟಿದ್ದು ನಿನ್ನೆ ಒಂದೇ ದಿನ 40,425 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ತಾಸುಗಳಲ್ಲಿ 681 ಮಂದಿ ಮೃತಪಟ್ಟಿದ್ದಾರೆ. ಆದರೆ ಇದೇ ವೇಳೆ ಮೊದಲ ಬಾರಿಗೆ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಶೇಕಡಾ 2.5ಕ್ಕಿಂತ ಕಡಿಮೆಯಾಗಿದೆ.