ದಶರಥ್ ಗೋಡ್ಕರ್ ಮುಂಬಯಿಯ ದಾದರ್ ಸಮೀಪದ ಭೋಯಿವಾಡದ ಫ್ಲೈಓವರ್ ಕೆಳಗಿನ ಖಾಯಂ ನಿವಾಸಿ. ದಿನಗೂಲಿ ಕಾರ್ಮಿಕನಾಗಿರುವ ಗೋಡ್ಕರ್ ನಿತ್ಯ 500 ರೂ.ಗೆ ಕಡಿಮೆಯಿಲ್ಲದಂತೆ ಸಂಪಾದಿಸುತ್ತಿದ್ದ. ಫ್ಲೈಓವರ್ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಕೆಲಸಕ್ಕೆ ರೆಡಿಯಾಗಿ ನಿಂತರೆ ಏನಾದರೊಂದು ಕೂಲಿ ಕೆಲಸ ಸಿಕ್ಕಿಯೇ ಸಿಗುತ್ತಿತ್ತು.ಹೀಗೆ ಬದುಕು ಸಾಗುತ್ತಿದ್ದಾಗ ವಕ್ಕರಿಸಿತು ಕೊರೊನಾ. ಸೋಂಕು ಹರಡುವ ಭೀತಿಯಲ್ಲಿ ಗೋಡ್ಕರ್ ನನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಪರೇಲ್ ನ ಫ್ಲೈಓವರ್ ನಡಿಗೆ ಸಾಗಿಸಲಾಯಿತು.ಅಲ್ಲಿ ಅವನಂಥ ಇನ್ನೂ ಸುಮಾರು 150 ಮಂದಿ ಜಮೆಯಾಗಿದ್ದರು. ಎಲ್ಲರದ್ದೂ ಹೆಚ್ಚು ಕಮ್ಮಿ ಗೋಡ್ಕರ್‌ನದ್ದೇ ಕತೆ.
ಕೊರೊನಾ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸುವ ಸಲುವಾಗಿ ಪದೇಪದೆ ಕೈ ತೊಳೆಯಿರಿ, ಸ್ಯಾನಿಟೈಸರ್ ಬಳಸಿ, ಹೊರಗೆಲ್ಲಾದರೂ ಹೋಗಿ ಬಂದರೆ ಸ್ನಾನ ಮಾಡಿ ಎನ್ನುತ್ತಿದೆ ಸರಕಾರ. ಇದನ್ನು ಕೇಳುವಾಗ ಗೋಡ್ಕರ್ ಗೆ ನಗುವುದೋ ಅಳವುದೋ ಎಂದು ಗೊತ್ತಾಗುವುದಿಲ್ಲ. ಏಕೆಂದರೆ ಸಾರ್ವಜನಿಕ ಶೌಚಾಲಯದಲ್ಲಿ ಸ್ನಾನ ಮಾಡಬೇಕಾದರೆ ದುಡ್ಡು ಕೊಡಬೇಕು.ಮೂತ್ರ ವಿಸರ್ಜನೆಗೆ 2 ರೂ., ಶೌಚಕ್ಕೆ 5 ರೂ. ,ಸ್ನಾನಕ್ಕೆ 10 ರೂ. ಎಂದೆಲ್ಲ ಅಲ್ಲಿ ದರ ಪಟ್ಟಿ ಇದೆ.ಒಬ್ಬ 5 ಸಲ ಮೂತ್ರ ವಿಸರ್ಜಿಸಿದರೆ, ಎರಡು ಸಲ ಶೌಚಕ್ಕೆ ಹೋದರೆ ಮತ್ತು ದಿನಕ್ಕೆ ಕನಿಷ್ಠ ಒಂದು ಸಲ ಸ್ನಾನ ಮಾಡಿದರೆ 25 ರೂ. ಬೇಕು.ಬಿಡಿಗಾಸು ಇಲ್ಲದ ಕೂಲಿ ಕಾರ್ಮಿಕರ ಪಾಲಿಗೆ ಇವೆಲ್ಲ ದುಬಾರಿ ಬಾಬತ್ತುಗಳು. ಲಾಕ್ ಡೌನ್ ಜಾರಿಯಾದ ಬಳಿಕ ಕೆಲಸವಿಲ್ಲದೆ ಖಾಲಿ ಕುಳಿತಿರುವ ಈ ದಿನಗೂಲಿ ಕಾರ್ಮಿಕರು ಹೊಟ್ಟೆ ತುಂಬಿಸಿಕೊಳ್ಳುವುದು ಯಾರೋ ದಾನಿಗಳು ತಂದು ಕೊಡುವ ಆಹಾರದಿಂದ. ಕೆಲವೊಮ್ಮೆ ಅನಿವಾರ್ಯ ಉಪವಾಸ ವ್ರತ.ಹೀಗಿರುವಾಗ ಪದೇಪದೆ ಕೈ ತೊಳೆಯಲು, ಸ್ನಾನ ಮಾಡಲು ಹಣ ತರುವುದೆಲ್ಲಿಂದ? ಸ್ನಾನ, ಸ್ಯಾನಿಟೈಸೇಶನ್ ,ಕೈ ತೊಳೆಯುವುದು ಇವೆಲ್ಲ ಭಾರೀ ಐಷರಾಮಿ ಸವಲತ್ತುಗಳು ಅವರ ಪಾಲಿಗೆ. ಅಪ್ಪಿತಪ್ಪಿ ಯಾರಾದರೂ ಕೂಲಿ ಕೆಲಸಕ್ಕೆ ಕರೆದು 100-200 ರೂ. ಸಿಕ್ಕಿದರೆ ಅಂದು ಹಬ್ಬ ಇವರ ಪಾಲಿಗೆ.ಸ್ನಾನ ವಾರಕ್ಕೋ, ಎರಡು ವಾರಕ್ಕೋ ಒಮ್ಮೆ. ಊರಿಗಾದರೂ ಹೋಗೋಣವೆಂದರೆ ಊರಾದರೂ ಎಲ್ಲಿದೆ? ಗೋಡ್ಕರ್ ಮತ್ತು ಅವನಂಥ ಸಾವಿರಾರು ಕಾರ್ಮಿಕರಿಗೆ ಇರುವ ಜಾಗವೇ ಊರು. ಇಲ್ಲೇ ಹುಟ್ಟಿ, ಇಲ್ಲೇ ಬದುಕಿ ಒಂದು ದಿನ ಇಲ್ಲೇ ಮಣ್ಣಾಗುವ ಅಜ್ಞಾತ ಜೀವಗಳಿವು.
ರಟ್ಟೆಯಲ್ಲಿ ಕಸುವು ಇರುವ ತನಕ ದುಡಿದು ಹೊಟ್ಟೆ ತುಂಬಿಸುವ ನೌಕರಿಗೆ ಬರವಿಲ್ಲದ ಈ ಮಹಾನಗರದ ಸ್ಥಿತಿ ಹೀಗಾದೀತು ಎಂದು ಗೋಡ್ಕರ್ ಆಗಲಿ ಅವನಂತೆಯೇ ಕೆಲಸವಿಲ್ಲದೆ ಕುಳಿತಿರುವ ಉಳಿದವರಾಗಲಿ ಕನಸು ಮನಸಿನಲ್ಲೂ ಎಣಿಸಿರದ ವಿಚಾರ. ಸ್ವಯಂ ಸೇವಕರು ಎಲ್ಲಿಯಾದರೂ ಆಹಾರ ವಿತರಿಸುವುದನ್ನು ನಿಲ್ಲಿಸಿಬಿಟ್ಟರೆ ಉಪವಾಸ ಬಿದ್ದು ಸಾಯುವುದಲ್ಲದೆ ಅನ್ಯ ದಾರಿಯಿಲ್ಲ ಎನ್ನುತ್ತಾರೆ ದಗಡು ಗಡಿ ಎಂಬ ಇನ್ನೋರ್ವ ಕೂಲಿ ಕಾರ್ಮಿಕ. ವಾಣಿಜ್ಯ ರಾಜಧಾನಿ, ಮಾಯಾ ನಗರಿ ಎಂಬಿತ್ಯಾದಿ ಆಕರ್ಷಕ ಅಭಿದಾನಗಳನ್ನು ಹೊತ್ತುಕೊಂಡಿರುವ ನಗರದ ಇನ್ನೊಂದು ಮುಖವಿದು.