ನಮ್ಮ ದೇಶದ ಉನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಭಾರತ ಸಂವಿಧಾನದ 21 ವಿಧಿಯನ್ನು ಉಲ್ಲೇಖಿಸಿ ನೀಡಿರುವ ತೀರ್ಪಿನ ಪ್ರಕಾರ ಜೀವಿಸಲು ಅಗತ್ಯವಿರುವ ಹಕ್ಕುಗಳ ಪೈಕಿ ನೀರಿನ ಹಕ್ಕು ಅತ್ಯಾಗತ್ಯವಾಗಿರುತ್ತದೆ. ಇದರನ್ವಯ ದೇಶದ ಎಲ್ಲಾ ರಾಜ್ಯಗಳು ತನ್ನ ವ್ಯಾಪ್ತಿ ಪ್ರದೇಶದ ಒಳಗಿನ ಎಲ್ಲಾ ಸಾರ್ವಜನಿಕ ಕೆರೆಗಳನ್ನು ಮತ್ತು ನೀರಿನ ತೊಟ್ಟಿಗಳನ್ನು ರಕ್ಷಿಸುವ ಮತ್ತು ಅಭಿವೃದ್ದಿಗೊಳಿಸುವ ಸಂಪೂರ್ಣವಾದ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯ ಸರಕಾರವು ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2014’ ಎಂಬ ಕಾನೂನನ್ನು ನಮ್ಮ ರಾಜ್ಯದಾದ್ಯಂತ ಜ್ಯಾರಿಗೆ ತಂದಿರುತ್ತದೆ. ಮಾತ್ರವಲ್ಲದೇ ಈ ಕಾನೂನನ್ನು ಪರಿಣಾಮಕಾರಿಯಾಗಿ ಜ್ಯಾರಿಗೊಳಿಸುವುದಕ್ಕಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃಧ್ಧಿ ಪ್ರಾಧಿಕಾರವನ್ನು ರಚಿಸಲು ಈ ಕಾನೂನಿನ ಮೂಲಕ ಅವಕಾಶ ಮಾಡಿಕೊಟ್ಟಿರುತ್ತದೆ. ಇದರಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃಧ್ಧಿ ಪ್ರಾಧಿಕಾರವು ನಮ್ಮ ರಾಜ್ಯ ಪ್ರದೇಶದೊಳಗಿನ ಯಾವುದೇ ಮತ್ತು ಎಲ್ಲಾ ಸಾರ್ವಜನಿಕ ಕೆರೆಗಳ ಮತ್ತು ನೀರಿನ ತೊಟ್ಟಿಗಳ ಸಂರಕ್ಷಣೆ ಮತ್ತು ಅಭಿವೃಧ್ಧಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದೆ.
ಈ ಕಾನೂನಿನ ನಿಯಮಾನುಸಾರದ ಪ್ರಕಾರ ಸಾರ್ವಜನಿಕರು ಯಾವುದೇ ಸಾರ್ವಜನಿಕ ಕೆರೆಗಳ ಅಥವಾ ನೀರಿನ ತೊಟ್ಟಿಗಳ 30 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತ್ಯಾಜ್ಯ, ಕೊಳಚೆ ನೀರು ಅಥವಾ ರಾಸಾಯನಿಕಗಳನ್ನು ಸುರಿಯುವಂತಿಲ್ಲ. ಮಾತ್ರವಲ್ಲದೇ ಮೇಲ್ಕಾಣಿಸಿದ ಪ್ರಾಧಿಕಾರದ ಅನುಮತಿಯಿಲ್ಲದೆ ಅನಧಿಕೃತವಾಗಿ ಸಾರ್ವಜನಿಕ ನೀರಿನ ಮೂಲಗಳ ಸುತ್ತಲೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಆದರೆ ಸಾರ್ವಜನಿಕ ಕೆರೆ ಅಥವಾ ನೀರಿನ ತೊಟ್ಟಿಯ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಥವಾ ಕೃಷಿ ಜಮೀನಿನ ನೀರಾವರಿ ಉದ್ದೇಶಕ್ಕಾಗಿ ಬಳಸಲು ಯಾವುದೇ ಕಾನೂನಿನ ನಿರ್ಬಂಧ ಇರುವುದಿಲ್ಲ. ಸಾರ್ವಜನಿಕ ಕೆರೆ ಮತ್ತು ತೊಟ್ಟಿಗಳ ನೀರಿನ ಗುಣಮಟ್ಟವನ್ನು ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಿಯಂತ್ರಿಸುವ ಜವಾಬ್ದಾರಿಯನ್ನು ಆಯಾಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಗರ ಪ್ರದೇಶಗಳಲ್ಲಿ ನಗರ ಸಭೆ ಅಥವಾ ಪುರಸಭೆಯಂತಹ ಸ್ಥಳೀಯ ಆಡಳಿತಗಳು ಹೊಂದಿರುತ್ತದೆ.
ಮೇಲ್ಕಾಣಿಸಿದ ಕಾನೂನಿನ ಪ್ರಕಾರದ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಕಾರವು ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದು ಈ ಪ್ರಾಧಿಕಾರವು ಸಾರ್ವಜನಿಕ ಕೆರೆ ಮತ್ತು ನೀರಿನ ಟ್ಯಾಂಕ್ ಮತ್ತು ಅದಕ್ಕೊಪ್ಪಿದ ಸ್ಥಳದ ಮೇಲೆ ಸಂಪೂರ್ಣ ನಿಯಂತ್ರಣ ಮತ್ತು ಅಧಿಕಾರವನ್ನು ಹೊಂದಿರುತ್ತದೆ. ಈ ಪ್ರಾಧಿಕಾರದ ಅಧ್ಯಕ್ಷರಾಗಿ ರಾಜ್ಯ ಸರಕಾರದ ಸಣ್ಣ ನೀರಾವರಿ ಸಚಿವರು ಮತ್ತು ಸದಸ್ಯರುಗಳಾಗಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಾದ ಹಣಕಾಸು ಇಲಾಖೆಯ, ಕಾನೂನು ಇಲಾಖೆಯ, ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ, ಕಂದಾಯ ಇಲಾಖೆಯ, ನಗರಾಭಿವೃದ್ಧಿ ಇಲಾಖೆಯ, ಕೃಷಿ ಇಲಾಖೆಯ, ಪಶು ಪಾಲನೆ ಮತ್ತು ಮೀನುಗಾರಿಕೆ ಇಲಾಖೆಯ, ಸಣ್ಣ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್, ಪರಿಸರ ಮತ್ತು ಪರಿಸರ ವಿಜ್ಞಾನ ಅಥವಾ ಟ್ಯಾಂಕ್ ಅಥವಾ ಸರೋವರ ಸಂರಕ್ಷಣೆ ಕ್ಷೇತ್ರದ ತಜ್ಞರುಗಳ ಪೈಕಿ ಸರಕಾರದಿಂದ ನಾಮ ನಿದೇರ್ಶನಗೊಂಡ ನಾಲ್ವರು ಅಧಿಕಾರೇತರ ಸದಸ್ಯರುಗಳು ಇವರುಗಳು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಮೇಲ್ಕಾಣಿಸಿದ ಪ್ರಾಧಿಕಾರವು ಕನಿಷ್ಟ 3 ತಿಂಗಳಿಗೊಮ್ಮೆ ಸಭೆಯನ್ನು ನಡೆಸಿ ತಮ್ಮ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕೆರೆ ಮತ್ತು ಟ್ಯಾಂಕ್‌ಗಳ ರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಸರಕಾರದಿಂದ ನೇಮಕವಾದ ಮೇಲ್ಕಾಣಿಸಿದ ಪ್ರಾಧಿಕಾರವು ಸಾರ್ವಜನಿಕ ಕೆರೆ ಮತ್ತು ಟ್ಯಾಂಕ್‌ಗಳ ಪುನರ್‌ಜೀವನ, ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ತನ್ನದೇ ಆದ ನಿಧಿಯನ್ನು ಹೊಂದಿದ್ದು ತನ್ನ ಕರ್ತವ್ಯವನ್ನು ನಿರ್ವಹಿಸಲು ಪ್ರಾಧಿಕಾರವು ಸೂಕ್ತವೆಂದು ಭಾವಿಸುವ ಮೊತ್ತವನ್ನು ಖರ್ಚು ಮಾಡಬಹುದಾಗಿದೆ.

























