ಕಾರ್ಕಳ: ಕಾಯಿಲೆ ಗುಣಮುಖವಾಗದ ನೋವಿನಿಂದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿ ಸಂಭವಿಸಿದೆ.
ಜೆಡ್ಡು ಮನೆ ನಿವಾಸಿ ಉಮೇಶ ಕೋಟ್ಯಾನ್ ಮೃತಪಟ್ಟವರು.
ಇವರು ಈ ಹಿಂದೆ ಮುಂಬೈನಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ಅಲ್ಲಿ ನಷ್ಟ ಅನುಭವಿಸಿದ ಕಾರಣ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದರು.
ಮೃತರು ಕರುಳಿನ ವ್ಯಾದಿ ಹಾಗೂ ಬಿಳಿ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಇದರ ನಡುವೆ ವಿಪರೀತ ಮದ್ಯಪಾನದ ಚಟ ಇತ್ತು. ಔಷಧೋಪಚಾರ ಮಾಡಿದರೂ ಅನಾರೋಗ್ಯದ ಸಮಸ್ಯೆ ಬಗೆಹರಿಯದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಏ. 4ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು.
ತಕ್ಷಣವೇ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಬುಧವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಮೃತರ ತಂಗಿ ಅಶ್ವಿನಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ










































































