ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಸಂಭ್ರಮದ ಶುಭಾಶಯಗಳು. ಪರಾಭವ ನಾಮದ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ ಎಂಬ ಹಾರೈಕೆ.

ಯುಗದ ಆದಿ ಯುಗಾದಿ
ಜಗತ್ತಿನಾದ್ಯಂತ ಜನವರಿ ಒಂದರಂದು ಹೊಸ ವರ್ಷ ಆಚರಣೆ ಮಾಡುತ್ತಿದ್ದರೆ ಹಿಂದೂಗಳು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡುತ್ತಾರೆ. ಪ್ರಾಕೃತಿಕವಾಗಿ ಕೂಡ ಇದೇ ಹೊಸ ವರ್ಷದ ಆರಂಭವಾಗಬೇಕು. ಏಕೆಂದರೆ ವಸಂತ ಋತುವಿನ ಆರಂಭ ಇಡೀ ಪ್ರಕೃತಿಗೆ ಚೈತನ್ಯ ತುಂಬುತ್ತದೆ. ಗಿಡ ಮರಗಳು ಪಲ್ಲವಿಸುತ್ತವೆ. ಚಿಗುರು ಒಡೆಯುತ್ತವೆ. ಮಾಮರಗಳು ಹೂವು ಬಿಡುತ್ತವೆ. ನದಿಗಳು ನಿಧಾನವಾಗಿ ಹರಿಯುತ್ತವೆ. ನೀಲಿ ಆಕಾಶದ ತುಂಬಾ ಬೆಳ್ಳನೆಯ ಮೋಡಗಳು ಕೊಡೆ ಹಿಡಿಯುತ್ತವೆ. ಬೆಳಿಗ್ಗೆ ಮತ್ತು ಸಂಜೆ ತಂಗಾಳಿಯು ಬೀಸಲಾರಂಭಿಸುತ್ತದೆ. ಒಟ್ಟಿನಲ್ಲಿ ಪ್ರಕೃತಿ ಮಾತೆಯು ಸ್ವಾಗತಕ್ಕೆ ಹಸಿರು ಉಡುಗೆಯನ್ನು ತೊಟ್ಟು ಮಂತ್ರಾಕ್ಷತೆ ಕೊಡುತ್ತದೆ.
ಭಾರತೀಯರು ಆಚರಿಸುವ ಮೊದಲ ಮಾಸ ಅಂದರೆ ಚೈತ್ರ ಮಾಸ. ಅದರ ಮೊದಲ ದಿನವೇ ಯುಗಾದಿ. ಅಂದರೆ ಚೈತ್ರ ಶುದ್ಧ ಪಾಡ್ಯದಂದು ಯುಗಾದಿ ಹಬ್ಬದ ಆಚರಣೆ ನಡೆಯುತ್ತದೆ. ಕೇರಳದಲ್ಲಿ ಇದನ್ನು ವಿಶು ಕಣಿ ಎಂದು ಹಸಿರು ತರಕಾರಿಗಳ ಮತ್ತು ಧಾನ್ಯಗಳ ಜೊತೆಗೆ ಆಚರಿಸುತ್ತಾರೆ. ಮುಂಬೈಯಲ್ಲಿ ಬೆಲ್ಲದ ಅಚ್ಚಿನ ನಡುವೆ ದೇವರನ್ನು ಕಾಣುವ ಗೋಡೆಪಾಡಾವ್ (ಸಿಹಿ ಪಾಡ್ಯ)ಎಂಬ ಹೆಸರಿನಿಂದ ಕರೆಯುತ್ತಾರೆ. ಸಿಂಧಿಗಳಿಗೆ ಈ ಹಬ್ಬ ಚೇಡಿ ಚಾಂದ್! ಮಣಿಪುರಿಯಲ್ಲಿ ಈ ಹಬ್ಬವು ಬಹು ದೊಡ್ಡ ಪ್ರಕೃತಿಯ ನಡುವೆ ಇರುವ ಸಜೀಬು ನೋಂಗ್ಮಾ ಪಾಂಬ್. ಇಂಡೋನೇಷ್ಯಾದಲ್ಲಿ ಇದನ್ನು ನೈಪಿ ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಭಾರತದ ಪ್ರತಿಯೊಂದು ಊರಿನಲ್ಲಿ, ಪ್ರತಿಯೊಂದು ನಾಡಿನಲ್ಲಿ ಆಚರಿಸುವ ವರ್ಷದ ಮೊದಲ ಹಿಂದೂ ಹಬ್ಬವೇ ಯುಗಾದಿ.

ಪಂಚಾಂಗ ಶ್ರವಣವೇ ಮುಖ್ಯ
ಮುಂಜಾನೆ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಮನೆಯವರೆಲ್ಲ ತೈಲಾಭ್ಯಂಗ ಮಾಡಿ ಶುಚಿಯಾಗುತ್ತಾರೆ. ನಂತರ ದೇವರ ಕೋಣೆಯಲ್ಲಿ ಬೆಲ್ಲದ ಅಚ್ಚು, ಹಸಿರು ತರಕಾರಿ, ಹಣ್ಣು ಹಂಪಲು, ಕಬ್ಬು, ಎಲ್ಲವನ್ನೂ ಒಪ್ಪ ಓರಣವಾಗಿಟ್ಟು ಅದರ ಮುಂದೆ ಕನ್ನಡಿ ಇಡುವ ಸಂಪ್ರದಾಯ ತುಳುನಾಡು ಮತ್ತು ಕೇರಳದಲ್ಲಿ ಇದೆ. ಇದನ್ನು ‘ವಿಶು ಕಣಿ ‘ ಎಂದು ಕೇರಳದಲ್ಲಿ ಕರೆಯುತ್ತಾರೆ. ತುಳುವರಿಗೆ ಅದು ಬಿಸು.

ಬೇವು ಬೆಲ್ಲಗಳನ್ನು ಪ್ರಸಾದವಾಗಿ ಹಂಚುವುದು ಸಂಪ್ರದಾಯ. ಸೋಲು ಮತ್ತು ಗೆಲುವುಗಳನ್ನು ಸಮನಾಗಿ ಸ್ವೀಕಾರ ಮಾಡುವುದು ಇದರ ಆಶಯ. ಪುರೋಹಿತರು ಮನೆಗೆ ಬಂದು ಮನೆಯವರೆಲ್ಲರ ಮುಂದೆ ಪಂಚಾಂಗ ಶ್ರವಣ ಮಾಡುವುದು ಮುಖ್ಯವಾದ ಆಚರಣೆ. ವಸ್ತ್ರದಾನ ಇಂದಿನ ಮುಖ್ಯವಾದ ದಾನ. ನಂತರ ಮನೆಯವರು ಎಲ್ಲ ದೇವಸ್ಥಾನಗಳಿಗೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆಯುತ್ತಾರೆ. ನಂತರ ಕುಟುಂಬದವರು ಎಲ್ಲರೂ ಸೇರಿ ಸಿಹಿ ಪಾಯಸದ ಊಟ ಇದ್ದೇ ಇರುತ್ತದೆ.

ಪೌರಾಣಿಕ ಹಿನ್ನೆಲೆ
ಬ್ರಹ್ಮದೇವರು ಸೃಷ್ಟಿಕಾರ್ಯ ಆರಂಭ ಮಾಡಿದ ದಿನವಿದು ಎಂಬುದು ಪೌರಾಣಿಕ ಹಿನ್ನೆಲೆ. ಹದಿನಾಲ್ಕು ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ರಾಮಚಂದ್ರ ದೇವರ ಪಟ್ಟಾಭಿಷೇಕ ಆದ ದಿನ ಅದು ಯುಗಾದಿ. ನಾನು ಮೊದಲೇ ಹೇಳಿದಂತೆ ವಸಂತ ಋತುವಿನ ಆರಂಭ ಅದು ಯುಗಾದಿ. ಹೀಗೆ ಭಾರತೀಯರ ಹೊಸ ವರ್ಷದ ಆರಂಭವು ಯುಗಾದಿ ಎಂಬುದು ನಮ್ಮೆಲ್ಲರ ಸಂಭ್ರಮಕ್ಕೆ ಕಾರಣ.
ಎಲ್ಲರಿಗೂ ಈ ಯುಗಾದಿ ಒಳ್ಳೇದನ್ನು ಮಾತ್ರ ತರಲಿ ಎಂಬುದು ಹಾರೈಕೆ.

































































































error: Content is protected !!
Scroll to Top