ಮಾ. 11ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯರು, ಆರೋಗ್ಯ ಇಲಾಖೆ ನೌಕರರ ಮುಷ್ಕರ – ಎಚ್ಚರಿಕೆ

ಉಡುಪಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸೇರಿದಂತೆ ಇಲಾಖೆಯ ನೌಕರರು ಮಾ. 11ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನಿಯೋಜಿತ ಅಧ್ಯಕ್ಷ ಡಾ. ನಿಕಿನ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 2 ವರ್ಷಗಳಿಂದ ನಮ್ಮ ಅನೇಕ ನ್ಯಾಯಸಮ್ಮತ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದಲ್ಲಿ ಮಾ. 11ರಿಂದ ಮುಷ್ಕರ ನಡೆಸಲಾಗುತ್ತದೆ. 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಡಿಸ್ಪೆನ್ಸರಿಗಳ ಎಲ್ಲಾ ವೃಂದದ ವೈದ್ಯರು, ಅಧಿಕಾರಿ- ನೌಕರರು ಕಪ್ಪುಪಟ್ಟಿ ಧರಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ದಿನಗಳಲ್ಲಿ ವೈದ್ಯರು ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗವನ್ನು (ಒಪಿಡಿ) ಸ್ಥಗಿತಗೊಳಿಸಲಿದ್ದು, ಶಸ್ತ್ರಚಿಕಿತ್ಸೆ, ಹೆರಿಗೆ ಮುಂತಾದ ತುರ್ತು ಅಗತ್ಯ ಸೇವೆಗಳನ್ನು ನೀಡಲಿದ್ದಾರೆ ಎಂದರು.

ಮಾ. 15ರ ಒಳಗೆ ನಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದೇ ಇದ್ದಲ್ಲಿ ಮಾ. 16ರಿಂದ ತುರ್ತುಸೇವೆಗಳನ್ನು ಕೂಡಾ ಸ್ಥಗಿತಗೊಳಿಸಿ, ರಾಜ್ಯದ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು, ಅಧಿಕಾರಿ-ನೌಕರರು ಕರ್ತವ್ಯಕ್ಕೆ ಅನಿರ್ದಿಷ್ಟಾವಧಿಯವರೆಗೆ ಗೈರುಹಾಜ ರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ನಿಕಿನ್ ಶೆಟ್ಟಿ ತಿಳಿಸಿದರು.

ಈ ಬಾರಿ ಸರಕಾರದ ಯಾವುದೇ ಬೆದರಿಕೆ, ಎಚ್ಚರಿಕೆಗಳಿಗೆ ಮಣಿಯದಿರಲು ಕಾರ್ಯಕಾರಿ ಸಮಿತಿ ಸಭೆ ನಿರ್ಣಯಿಸಿದೆ. ಹೀಗಾಗಿ ಈ ಬಾರಿ ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿಯಲಿದೆ ಎಂದವರು ತಿಳಿಸಿದರು. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಸಂಖ್ಯೆ ನಿವೃತ್ತಿ ಮತ್ತು ಇತರೆ ಕಾರಣಗಳಿಂದ ಕಡಿಮೆಯಾಗುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಯಾಗುತ್ತಿಲ್ಲ. ಹೀಗಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಮೇಲೆ ವಿಪರೀತ ಒತ್ತಡವಿದೆ. ಅಲ್ಲದೇ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ನೌಕರರಿಗೆ ಕಳೆದ ಐದು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ ಡಾ. ನಿಕಿನ್ ತಿಳಿಸಿದರು.

ಔಷಧ ಪೂರೈಕೆ ಸ್ಥಗಿತ
ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಇಲಾಖೆಯಿಂದ ಸಮರ್ಪಕವಾಗಿ ಔಷಧಿಗಳ ಸರಬರಾಜು ಆಗುತ್ತಿಲ್ಲ. ಇದು ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ತೀವ್ರ ಒತ್ತಡವನ್ನು ತರುತ್ತಿದೆ. ಜನರ ಆಕ್ರೋಶಕ್ಕೂ ನಾವು ತುತ್ತಾಗುತ್ತಿದ್ದೇವೆ. ಈ ಬಗ್ಗೆ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತಿಲ್ಲ. ಅಗತ್ಯ ಔಷಧಿಗಳಾದ ಇನ್ಸುಲಿನ್, ಆ್ಯಂಟಿ ರೇಬಿಸ್ ವ್ಯಾಕ್ಸಿನ್, ಐವಿ ಫ್ಲೂಯಿಡ್ಸ್, ಆ್ಯಂಟಿ ಬಯಾಟಿಕ್ಸ್‌ಗಳ ಸಂಗ್ರಹ ಸಹ ಖಾಲಿಯಾಗಿದೆ. ಈ ಔಷಧಿಗಳನ್ನು ಲೋಕಲ್ ಫಂಡ್ ಮುಖಾಂತರ ಖರೀದಿಸಲು ಅಷ್ಟೊಂದು ಹಣವಿಲ್ಲದೇ ಇರುವುದರಿಂದ ವೈದ್ಯರಿಗೆ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಇನ್ನು ಸ್ಥಳೀಯವಾಗಿ ಖರೀದಿಸುವ ಔಷಧಿಗಳ ಗುಣಮಟ್ಟದ ಖಾತ್ರಿ ಇಲ್ಲದಿರುವುದು ಸಹ ವೈದ್ಯರಿಗೆ ಸಮಸ್ಯೆ ತರುತ್ತಿದೆ ಎಂದರು.

ಪ್ರಕ್ರಿಯೆಯಿಲ್ಲ
ಮಂಜೂರಾದ ಹುದ್ದೆಗಳಿಗೆ ಗುತ್ತಿಗೆ ವೈದ್ಯರು, ನೌಕರರನ್ನು ನೇಮಿಸಿಕೊಂಡು ಮೂರು ವರ್ಷಗಳ ಬಳಿಕ ಅವರನ್ನು ಖಾಯಂಗೊಳಿಸಲಾಗುತ್ತಿತ್ತು. ಇದೀಗ ಈ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಗುತ್ತಿಗೆ ವೈದ್ಯರು ಮತ್ತು ನೌಕರರು ಸೇವಾ ಭದ್ರತೆ ಇಲ್ಲದೇ ಅತಂತ್ರರಾಗಿದ್ದಾರೆ. ಇಂಥ ಗುತ್ತಿಗೆ ವೈದ್ಯರು ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಕಾಲಕಾಲಕ್ಕೆ ವೇತನ ಹೆಚ್ಚಳಕ್ಕೆ ಸರಕಾರದ ಮುಂದೆ ಬೇಡಿಕೆ ಇರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ. ಸಂದೀಪ್ ಎ.ಎಸ್., ಕಾರ್ಯದರ್ಶಿ ಡಾ. ರಾಜೇಶ್ ಸಿ.ಎಸ್., ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ದಿನಕರ ಶೆಟ್ಟಿ, ಆರೋಗ್ಯ ಇಲಾಖೆ ಕೇಂದ್ರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಆನಂದ್ ಜತ್ತನ್ ಮೊದಲಾದವರು ಉಪಸ್ಥಿತರಿದ್ದರು.

















































































































error: Content is protected !!
Scroll to Top