ರಾಜ್ಯದಲ್ಲೇ ಎಕ್ಸ್‌ಪರಿಮೆಂಟಲ್ ಸ್ಕೂಲ್ – ವೀರಪ್ಪ ಮೊಯ್ಲಿ
ಕಾರ್ಕಳ : ಗ್ರಾಮೀಣ ಭಾಗದಲ್ಲಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ 1992ರಲ್ಲಿ ಕಿಸಾನ್ ಸಭಾ ಟ್ರಸ್ಟ್ ಮೂಲಕ ಕಾರ್ಕಳದಲ್ಲಿ ಪ್ರಾರಂಭಿಸಿದ ಮಹಾತ್ಮ ಗಾಂಧಿ ಶಾಲೆ ರಾಜ್ಯದಲ್ಲೇ ಒಂದು ಎಕ್ಸ್‌ಪರಿಮೆಂಟಲ್ ಸ್ಕೂಲ್ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಹೇಳಿದರು.
ಫೆ. 25ರಂದು ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ 35ನೇ ವಾರ್ಷಿಕೋತ್ಸವ ಹಾಗೂ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಕುರಿತು ಶಾಲೆಯಲ್ಲಿ ಫೆ. 23ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭೂಮಿಗೆ ಸಂಬಂಧಪಟ್ಟಂತೆ ರೈತರು ಅನುಭವಿಸುತ್ತಿದ್ದ ಸಮಸ್ಯೆ ನಿವಾರಣೆ ಹಾಗೂ ಅನಕ್ಷರತೆ, ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಾಲಾಡಿಸುವ ಉದ್ದೇಶದೊಂದಿಗೆ 1968ರಲ್ಲಿ ಕಿಸಾನ್ ಸಭಾವನ್ನು ಪ್ರಾರಂಭಿಸಲಾಯಿತು. ಮುಂದೆ ಕಿಸಾನ್ ಸಭಾ ಟ್ರಸ್ಟ್ ಮೂಲಕ ಶಿಕ್ಷಣ ವಂಚಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಲುವಾಗಿ 1992 ರಲ್ಲಿ ಮಹಾತ್ಮ ಗಾಂಧಿ ವಸತಿ ಶಾಲೆಯನ್ನು ಪ್ರಾರಂಭಿಸಲಾಯಿತು. ಇಲ್ಲಿ ಶಿಕ್ಷಣ ಪಡೆಯಲು ಆರ್ಥಿಕವಾಗಿ ಸದೃಢವಿಲ್ಲದ ವಿದ್ಯಾರ್ಥಿಗಳಿಗೆ 8 ರಿಂದ 10ನೇ ತರಗತಿಯವರೆಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಅಲ್ಲದೆ 35% ಪಡೆದ ಮಕ್ಕಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಅಂತಹ ವಿದ್ಯಾರ್ಥಿಗಳು ಎಸ್ಸೆಸೆಲ್ಸಿಯಲ್ಲಿ 80 ರಿಂದ 85% ಅಂಕ ಪಡೆಯುವಂತೆ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಮೊದಲ ಬಾರಿ ವಾರ್ಷಿಕೋತ್ಸವ
ಉಚಿತ ಶಿಕ್ಷಣದೊಂದಿಗೆ ಶಾಲೆಯು ರಾಜ್ಯದಲ್ಲೇ ವಿಶೇಷ ಶಾಲೆಯಾಗಿದ್ದು, ಇಲ್ಲಿನ ವ್ಯವಸ್ಥೆಯನ್ನು ನೋಡಬೇಕೆನ್ನುವುದು ರಾಜ್ಯದ ಮುಖ್ಯಂತ್ರಿಗಳ ಆಶಯವೂ ಆಗಿದೆ. ಆದ್ದರಿಂದ ಶಾಲೆಗೆ ಸಂಬಂಧಪಟ್ಟ ಟ್ರಸ್ಟ್‌ನ ಸಭಾಂಗಣ ಉದ್ಘಾಟನೆ ಹಾಗೂ 35 ವರ್ಷಗಳಿಂದ ಮೊದಲ ಬಾರಿಗೆ ನಡೆಯುತ್ತಿರುವ ವಾರ್ಷಿಕೋತ್ಸವ ಸಮಾರಂಭಕ್ಕೆ ಸಿಎಂ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಅಲ್ಲದೆ ಇಂತಹ ಶಿಕ್ಷಣ ವ್ಯವಸ್ಥೆಯ ಅವಶ್ಯಕತೆಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ತಿಳಿಸಿಕೊಡುವುದು ಕೂಡ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸಿದ್ದರಾಮಯ್ಯ ಅವರು ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಕಾರ್ಕಳ ತಾಲೂಕು ಕ್ರೀಡಾಂಗಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಕಾಬೆಟ್ಟುವಿನಲ್ಲಿರುವ ಅಂಬೇಡ್ಕರ್ ಭವನದ ಉದ್ಘಾಟನೆ, ತಾಲೂಕು ಕಚೇರಿ ರಸ್ತೆಯಲ್ಲಿರುವ ಕಿಸಾನ್ ಸಭಾ ಸಭಾಂಗಣದ ಉದ್ಘಾಟನೆ ಮಾಡಿ ಬಳಿಕ ಕುಕ್ಕುಂದೂರಿನಲ್ಲಿರುವ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸಭಾಂಗಣದ ಆದಾಯ ಶಾಲಾ ಮಕ್ಕಳ ಶಿಕ್ಷಣಕ್ಕೆ ವಿನಿಯೋಗ – ಹರ್ಷ ಮೊಯ್ಲಿ
ಕಿಸಾನ್ ಸಭಾ ಟ್ರಸ್ಟ್‌ನ ಅಧ್ಯಕ್ಷ ಹರ್ಷ ಮೊಯ್ಲಿ ಮಾತನಾಡಿ, ಕಡುಬಡುತನ ಕುಟುಂಬದಿಂದ ಬಂದ ರಾಜ್ಯ ವಿವಿಧ ಭಾಗದ ವಿದ್ಯಾರ್ಥಿಗಳು ಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಕಿಸಾನ್ ಸಭಾದ ನೂತನ ಸಭಾಂಗಣದಿಂದ ಬರುವ ಆದಾಯವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸಲಾಗುವುದು ಎಂದರು.
ರಂಗ ಮಂದಿರಕ್ಕೆ ನಿಟ್ಟೆ ವಿನಯ್ ಹೆಗ್ಡೆ ಹೆಸರು
ಶಾಲೆಗೆ ಕಳೆದ 6 ವರ್ಷಗಳಿಂದ ನಿಟ್ಟೆಯ ವಿನಯ್ ಹೆಗ್ಡೆ ಅವರು ದೊಡ್ಡ ಮಟ್ಟದ ದೇಣಿಗೆ ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಬಯಲು ರಂಗ ಮಂದಿರಕ್ಕೆ ನಿಟ್ಟೆ ವಿನಯ್ ಹೆಗ್ಡೆ ಹೆಸರಿಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಶುಭದ ರಾವ್, ಟ್ರಸ್ಟ್‌ನ ಕಾರ್ಯದರ್ಶಿ ಸದಾಶಿವ ದೇವಾಡಿಗ, ಕೋಶಾಧಿಕಾರಿ ಉಮೇಶ್ ರಾವ್ ಬಜಗೋಳಿ, ಟ್ರಸ್ಟಿ ಬಿ. ಕೃಷ್ಣಮೂರ್ತಿ, ಹೆಬ್ರಿ ಎಸ್.ಆರ್. ಕಾಲೇಜು ಅಧ್ಯಕ್ಷ ನಾಗರಾಜ ಶೆಟ್ಟಿ, ಭಾಸ್ಕರ್, ಡಿ.ಕೆ. ಅಶೋಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.































