ನಾಳೆಯಿಂದ 27 ಮಂದಿ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ

ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ 27 ಜನ ಕಾಂಗ್ರೆಸ್ ಶಾಸಕರ ತಂಡ ವಿದೇಶಿ ಪ್ರವಾಸಕ್ಕೆ ಸಿದ್ದವಾಗಿ ನಿಂತಿದೆ. ವಿದೇಶಕ್ಕೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ಪರ –ವಿರೋಧ ಚರ್ಚೆಗಳ ನಡುವೆಯೂ ಈ ಪ್ರವಾಸ ಫಿಕ್ಸ್ ಆಗಿದೆ. ಮಂಗಳವಾರ 27 ಮಂದಿ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಬೆಳಸಲಿದ್ದಾರೆ. ಇದರಲ್ಲಿ ಪರಿಷತ್ ಸದಸ್ಯವೂ ಒಳಗೊಂಡಿದ್ದಾರೆ.

ಮಂಗಳವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣ ಮಾಡಲು ತೀರ್ಮಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಶಾಸಕರು ಈ ಪ್ರವಾಸ ತೆರಳುತ್ತಿರುವ ತಂಡದಲ್ಲಿ ಇದ್ದಾರೆ. ಹಾಗಾಗಿ ಈ ಪ್ರವಾಸ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ವಿದೇಶಕ್ಕೆ ಹೊರಟು ನಿಂತ ಶಾಸಕರ ಪೈಕಿ ಕೆಲವು ಶಾಸಕರು ವೀಸಾ ಸಿಗದ ಕಾರಣ ಪ್ರವಾಸ ರದ್ದು ಮಾಡಿದ್ದಾರೆ. ಆದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿ ಆಗಬಹುದು ಎಂಬ ಪರೋಕ್ಷ ಆತಂಕವೇ ಇದಕ್ಕೆ ಕಾರಣ ಎಂಬುವುದು ಕೆಲವರ ಅಭಿಪ್ರಾಯವಾಗಿದೆ. ಇನ್ನು ಕುಟುಂಬ ಸಹಿತ ಪ್ರವಾಸಕ್ಕೆ ತೆರಳಲು ಮುಂದಾಗಿದ್ದರೂ, ಈ ಪ್ರವಾಸ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿರುವ ಹಿನ್ನೆಲೆಯಲ್ಲಿ ಶಾಸಕರು ಗೊಂದಲಕ್ಕೆ ಒಳಗಾಗಿದ್ದರು. ಹಾಗಾಗಿ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದ್ದರು. ಇನ್ನು ಕೆಲವು ಶಾಸಕರು ಗಟ್ಟಿ ಮನಸ್ಸು ಮಾಡಿ ಪ್ರವಾಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಶಾಸಕರು ಪ್ರವಾಸ ಬೆಳಸಲಿದ್ದಾರೆ. ಮಾರ್ಚ್ 1 ರಂದು ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೃಷಿ ಕುರಿತಾಗಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ಈ ಪ್ರವಾಸ ಎಂಬುವುದು ಶಾಸಕರು ಸಮರ್ಥನೆಯಾಗಿದೆ.

ಶಾಸಕರ ಪ್ರವಾಸ ನಾನಾ ರೀತಿಯ ವ್ಯಾಖ್ಯಾನಕ್ಕೆ ಒಳಗಾಗಿತ್ತು. ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಭದಲ್ಲಿ ದಿಢೀರ್ ವಿದೇಶಕ್ಕೆ ತೆರಳುತ್ತಿರುವ ಅಗತ್ಯ ಏನಿದೆ? ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ನಡುವೆ ಪಶುಸಂಗೋಪನೆ ಇಲಾಖೆಯಿಂದ ಪ್ರವಾಸ ಆಯೋಜನೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಪಶುಸಂಗೋಪನೆ ಇಲಾಖೆ ಸಚಿವರಾದ ಕೆ. ವೆಂಕಟೇಶ್ ಅವರು ಇದನ್ನು ನಿರಾಕರಣೆ ಮಾಡಿದ್ದರು.

ಇನ್ನು ವಿದೇಶ ಪ್ರವಾಸಕ್ಕೆ ಕಾಂಗ್ರೆಸ್ ಶಾಸಕರು ತಮ್ಮದೇ ಆದ ಸಮರ್ಥನೆಯನ್ನು ನೀಡುತ್ತಿದ್ದಾರೆ. ಪ್ರವಾಸದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಇದೊಂದು ಖಾಸಗಿ ಪ್ರವಾಸ ಆಗಿದೆ. ತಮ್ಮ ಕುಟುಂಬದ ಸದಸ್ಯರ ಜೊತೆಗೆ ಹೋಗುತ್ತಿದ್ದೇವೆ. ಕುಟುಂಬದ ಸದಸ್ಯರು ಜೊತೆಗಿದ್ದಾಗ ರಾಜಕೀಯ ಚರ್ಚೆ, ಮಾತುಕತೆ ಸಾಧ್ಯವೇ ಎಂಬುವುದು ಪ್ರಶ್ನೆಯಾಗಿದೆ.



































































































error: Content is protected !!
Scroll to Top