ಉಡುಪಿ : ರಾಜ್ಯ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದವು. ಬಾಕಿ ಇರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಮಾಡಲು ಮೊದಲು ಗಮನ ಹರಿಸಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆರ್‌ಎಸ್‌ಎಸ್‌ನ್ನು ಟೀಕಿಸಿ ದೇಶಾದ್ಯಂತ ಸುದ್ದಿಯಾಗಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.
ಉಡುಪಿಯಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟ, ಮೀಸಲಾತಿಯ ಬಗ್ಗೆ ಗೊಂದಲದಿಂದಾಗಿ ಇಲ್ಲಿಯವರೆಗೆ ಚುನಾವಣೆ ನಡೆದಿರಲಿಲ್ಲ. ಆದರೆ, ಇದೀಗ ಮೀಸಲಾತಿ ಗೊಂದಲ ಪರಿಹಾರ ಆದ ಮೇಲೂ ಗ್ರಾಮೀಣಾಭಿವೃದ್ಧಿ ಇಲಾಖೆ ಚುನಾವಣೆ ಕುರಿತು ಗಮನ ವಹಿಸಿಲ್ಲ ಎಂದು ವ್ಯಂಗ್ಯವಾಡಿದ ಕೋಟ ತೀರ್ಪಿನ ಗೊಂದಲ ಪರಿಹಾರ ಆಗಿದೆ. ಇನ್ನು ಚುನಾವಣೆ ಮುಂದೂಡಲು ಯಾವುದೇ ಕಾರಣಗಳಿಲ್ಲ. ತಕ್ಷಣ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ನಡೆಸಬೇಕು ಎಂದರು.
ಚುನಾವಣೆಯನ್ನು ನಡೆಸಲು ಆದ್ಯತೆ ನೀಡುವ ಬದಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನಿಯಂತ್ರಣ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆಯುತಿದ್ದಾರೆ ಎಂದು ಟೀಕಿಸಿದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮೀಣಾಭಿವೃದ್ಧಿ ಸಚಿವರೇ ಮೊದಲು ಗ್ರಂಥಪಾಲಕರ ಸಮಸ್ಯೆ ಬಗೆಹರಿಸಿ. ಗ್ರಂಥಪಾಲಕರಿಗೆ ವೇತನವನ್ನು 19,000 ರೂ.ಗೆ ಏರಿಸಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಇದು ವೈಯಕ್ತಿಕ ಟೀಕೆಯಲ್ಲ, ವಿಷಯದ ಮೇಲೆ ಮಾಡುತ್ತಿರುವ ಆಕ್ಷೇಪ ಎಂದರು.

ಆರ್‌ಎಸ್‌ಎಸ್ ನಿಯಂತ್ರಣ ನಿಮಗೆ ಸಾಧ್ಯವಾಗದಿರುವ ಕೆಲಸ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿಯವರಿಗೆ ಆಗದ ಕೆಲಸ ನಿಮ್ಮಿಂದ ಸಾಧ್ಯವಿಲ್ಲ ಎಂದು ಕೋಟ ಹೇಳಿದರು.





























































