ಪ್ರಕರಣದ ಸೃಷ್ಟಿಕರ್ತರು ಯಾರು – ಎಷ್ಟು ಪರ್ಸೆಂಟ್ ಕಪ್ಪ ನಿಗದಿ – ಸುನಿಲ್ ಕುಮಾರ್ ಪ್ರಶ್ನೆ
ಬೆಂಗಳೂರು : ಆಡಳಿತ ಯಂತ್ರವೊಂದು ಭ್ರಷ್ಟಗೊಂಡಾಗ, ನೆಲದ ಕಾನೂನು ಹಾಗೂ ನಿಯಮಗಳನ್ನು ಗಾಳಿಗೆ ತೂರಿದಾಗ ಏನೇನಾಗಬಹುದೆಂಬುದಕ್ಕೆ ಬಿಗ್ ಬಾಸ್ ಮನೆಗೆ ಏಕಾಏಕಿ ಬೀಗಮುದ್ರೆ ಹಾಕಿದ್ದು ಹಾಗೂ ಏಕಾಏಕಿ ತೆರವು ಮಾಡಿದ ಘಟನೆಯೇ ಸಾಕ್ಷಿ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿರುವ ಸುನಿಲ್ ಕುಮಾರ್, ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಪಾರ್ಕ್ನಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸೂಚನೆ ಮೇರೆಗೆ ಅ.6 ರಂದು ಸ್ಥಳೀಯ ತಹಶೀಲ್ದಾರ್ ನೇತೃತ್ವದಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದರು. ಆದರೆ, ಮರುದಿನ ತಡರಾತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರೆಂಬ ಕಾರಣಕ್ಕೆ ಖುದ್ದು ರಾಮನಗರ ಡಿಸಿಯೇ ಮುಂದೆ ನಿಂತು ಬೀಗಮುದ್ರೆ ತೆರೆಸಿದರು. ಎರಡು ದಿನಗಳ ಕಾಲನಡೆದ ಈ ಪ್ರಹಸನ ಮೇಲ್ನೋಟಕ್ಕೆ ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಬದಲಿಸಿದ ಹುಚ್ಚು ದೊರೆ ತುಘಲಕ್ನ ಆಡಳಿತಕ್ಕಿಂತ ಕಿಂಚಿತ್ ಭಿನ್ನವಾಗಿರಲಿಲ್ಲ. ಹಾಗಾದರೆ ಒಟ್ಟಾರೆ ಈ ಪ್ರಕರಣದ ಸೃಷ್ಟಿಕರ್ತರು ಯಾರು ? ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಕೀಲುಗೊಂಬೆಯ ರೀತಿ ಯಾರದೋ ಇಶಾರೆಗೆ ಒಳಪಟ್ಟು ಬಿಗ್ ಬಾಸ್ ನಟ್ಟು ಬೋಲ್ಟ್ ಟೈಟ್ ಮಾಡಲು ಮುಂದಾದರೋ ? ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯೂ ಸರಕಾರದ ರೀತಿ 80% ಪರ್ಸೆಂಟ್ ಕಮಿಷನ್ ಹೊಡೆಯುವುದಕ್ಕಾಗಿ ಬಿಗ್ ಬಾಸ್ ಗೆ ನೋಟಿಸ್ ಕೊಡುವ ನಾಟಕ ಮಾಡಿತೋ ? ಎಂದು ಪ್ರಶ್ನಿಸಿದ್ದಾರೆ.

ಉತ್ತರಿಸುವವರು ಯಾರು ?
ಇಡಿ ರಾಜ್ಯಕ್ಕೆ ಸೂಕ್ತ ತ್ಯಾಜ್ಯ ವಿಲೇವಾರಿ ನೀತಿ ಇಲ್ಲ. ಬೆಂಗಳೂರು ಗಾರ್ಬೇಜ್ ನಗರವಾಗಿ ಪರಿವರ್ತನೆಯಾಗಿದೆ. ಹೀಗಿರುವಾಗ ನರೇಂದ್ರ ಸ್ವಾಮಿಯವರು ಗ್ರೇಟರ್ ಬೆಂಗಳೂರು ಕೇಂದ್ರ ಕಚೇರಿಗೆ ನೋಟಿಸ್ ನೀಡಲು ಧೈರ್ಯ ಪ್ರದರ್ಶಿಸಬಲ್ಲರೇ ? ಇಲ್ಲ. ಏಕೆಂದರೆ ಮಾಲಿನ್ಯ ನಿಯಂತ್ರಣ ವಿಚಾರವೂ ಈ ಸರ್ಕಾರಕ್ಕೆ ಕಪ್ಪ ಸಂಗ್ರಹದ ದಂಧೆಯಾಗಿದೆ ಎಂಬ ಆರೋಪ ಈಗ ಸಾರ್ವಜನಿಕ ವಲಯದಲ್ಲಿ ಜಗಜ್ಜಾಹಿರಾಗಿದೆ. ಬಿಗ್ ಬಾಸ್ ಬೀಗಮುದ್ರೆ ಬಳಿಕ ಕಾಳರಾತ್ರಿಯಲ್ಲಿ ನಡೆದ ವ್ಯವಹಾರಕ್ಕೆ ಎಷ್ಟು ಪರ್ಸೆಂಟ್ ಕಪ್ಪ ನಿಗದಿ ಮಾಡಲಾಗಿತ್ತು ಎಂದು ಇಡಿ ರಾಜ್ಯ ಕೇಳುತ್ತಿದೆ. ಇದಕ್ಕೆ ಉತ್ತರಿಸುವವರು ಯಾರು ? ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಯೋ ?, ಹಾಲಿ ಮುಖ್ಯಮಂತ್ರಿಯೋ ಅಥವಾ ರಾತ್ರೋರಾತ್ರಿ ರಿಲೀಫ್ ಕೊಟ್ಟ ಉಪಮುಖ್ಯಮಂತ್ರಿಯೋ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.








































