ಕಾರ್ಕಳ : ಕಾರ್ಕಳದಲ್ಲಿ ನೂತನವಾಗಿ ರಚನೆಗೊಂಡಿರುವ ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್‌ನ ಪದಗ್ರಹಣ ಸಮಾರಂಭವು ಅ. 5ರಂದು ಹೊಟೇಲ್ ಅನಘಾ ಗ್ರ್ಯಾಂಡ್ ಸಭಾಂಗಣದಲ್ಲಿ ಜರುಗಿತು. ಲಯನ್ಸ್ ಇಂಟರ್‌ನ್ಯಾಶನಲ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಉಡುಪಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಪ್ರಾಯೋಜಿತ ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಅಧ್ಯಕ್ಷರಾಗಿ ಅರುಣ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ದತ್ತಾತ್ರೇಯ, ಖಜಾಂಚಿಯಾಗಿ ಮಂಜುನಾಥ್ ಪಾಟೀಲ್ ಹಾಗೂ ಸರ್ವ ಸದಸ್ಯರಿಗೆ ಲಯನ್ಸ್ ಜಿಲ್ಲೆ 317ಸಿ ಇದರ ದ್ವಿತೀಯ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಪದಪ್ರದಾನ ಮಾಡಿದರು.
ಸನ್ಮಾನ
ವಾಯ್ಸ್ ಆಫ್ ಆರಾಧನ ನಿರ್ದೇಶಕಿ ಪದ್ಮಶ್ರೀ ಭಟ್ ಸೇರಿದಂತೆ 50 ಮಂದಿ ಯುವ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಗಿರೀಶ್ ರಾವ್, ವಲಯಾಧ್ಯಕ್ಷೆ ಗೀತಾ ರಾವ್ ಮತ್ತು ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಬಿನೇಶ್ ವಿ.ಸಿ. ಉಪಸ್ಥಿತರಿದ್ದರು. ಸುಧೀಂದ್ರ ಪ್ರಾರ್ಥಿಸಿ, ಗಿರೀಶ್ ರಾವ್ ಸ್ವಾಗತಿಸಿದರು. ಆಶೀಶ್ ಶೆಟ್ಟಿ ನಿರೂಪಿಸಿ, ದತ್ತಾತ್ರೇಯ ವಂದಿಸಿದರು. ಬಳಿಕ ಆರಾಧನ ತಂಡದಿಂದ ಹೆಜ್ಜೆ-ಗೆಜ್ಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.










