23 ವರ್ಷಗಳ ಹಿಂದೆ ಎಸ್ಐಆರ್ ನಡೆದಿತ್ತು
ಬೆಂಗಳೂರು : ಕರ್ನಾಟಕದಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಗೆ ರಾಜ್ಯ ಚುನಾವಣಾ ಆಯೋಗ ಸಂಪೂರ್ಣ ಸಜ್ಜಾಗಿದೆ. ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ರಾಜ್ಯದಲ್ಲೂ ಪ್ರಕ್ರಿಯೆ ಆರಂಭವಾಗಲಿದೆ.
ಪೌರತ್ವ ಕಾಯಿದೆ ಪ್ರಕಾರ, ರಾಜ್ಯದಲ್ಲಿ ಎಲ್ಲ ಅರ್ಹ ನಾಗರಿಕರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕುವುದು ಎಸ್ಐಆರ್ನ ಮುಖ್ಯ ಉದ್ದೇಶ. ಹೀಗಾಗಿ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್ಐಆರ್ಗೆ ಸಿದ್ಧತೆ ನಡೆಸಿದ್ದು, ಸೆ. 25ಕ್ಕೆ ತಯಾರಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಬುಧವಾರ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ 2002ರಲ್ಲಿ ಎಸ್ಐಆರ್ ನಡೆದಿತ್ತು. ಇದೀಗ 23 ವರ್ಷಗಳ ನಂತರ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. 2002ರ ಎಸ್ಐಆರ್ಗೆ ಸಂಬಂಧಿಸಿದ ಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಎರಡೂವರೆಯಿಂದ ಮೂರು ತಿಂಗಳೊಳಗೆ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಹೊಸ ಮತದಾರ ಪಟ್ಟಿ ಪ್ರಕಟಿಸಲಾಗುವುದು. ಅದರಲ್ಲಿರುವ ಮತದಾರರು ಪ್ರಸ್ತುತ ಪಟ್ಟಿಯಲ್ಲಿದ್ದಾರೆಯೇ, ಇಲ್ಲವೋ ಎಂಬುದನ್ನು ಖಚಿತಪಡಿಸಲಾಗುವುದು. ಪ್ರಕ್ರಿಯೆ ಆರಂಭವಾದ ನಂತರ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪ್ರತಿ ಮನೆ-ಮನೆಗೆ ತೆರಳಿ, ಪರಿಷ್ಕರಣೆ ಮಾಡಲಿದ್ದಾರೆ ಎಂದರು.
ರಾಜ್ಯದಲ್ಲಿ ಒಟ್ಟು 58 ಸಾವಿರ ಮತಗಟ್ಟೆಗಳಿವೆ. ಎಸ್ಐಆರ್ಗೆ 25 ಸಾವಿರ ಬಿಎಲ್ಒಗಳಿದ್ದು, ಅವರಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ಪ್ರತಿ 10 ಬಿಎಲ್ಒಗಳಿಗೆ ಒಬ್ಬರಂತೆ ಮೇಲ್ವಿಚಾರಕ ಅಧಿಕಾರಿ ಇರಲಿದ್ದಾರೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಗರ ಪ್ರದೇಶದ ವಾರ್ಡ್ ಮಟ್ಟದಲ್ಲಿ ಬಿಎಲ್ಒಗಳಿಗೆ ಸಹಾಯವಾಗುವಂತೆ ಕ್ಯಾಂಪ್ ಹಾಕಲಾಗುವುದು. ಬಿಎಲ್ಓಗೆ ಕ್ಯೂಆರ್ ಕೋಡ್ ಆಧಾರಿತ ತಂತ್ರಾಂಶ ನೀಡಲಾಗಿದ್ದು, ಸ್ಕ್ಯಾನ್ ಮಾಡಿ ಮಾಹಿತಿ ಸಂಗ್ರಹಿಸಲು ಸಹಾಯಕವಾಗಲಿದೆ ಎಂದರು.
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಸಜ್ಜು
ಬಿಎಲ್ಒಗಳು ಮನೆಮನೆಗೆ ಭೇಟಿ
‘ಕ್ಯೂಆರ್ ಕೋಡ್’ ಆಧಾರಿತ ಅರ್ಜಿಯ ಎರಡು ಪ್ರತಿಯಲ್ಲಿ ಮಾಹಿತಿ ಸಂಗ್ರಹ
ಅಧಿಕಾರಿಗಳು ಸಹಿ ಮಾಡಿದ ಒಂದು ಪ್ರತಿ ಮತದಾರರಿಗೆ ಸಲ್ಲಿಕೆ
ಮನೆಯಲ್ಲಿಯಾರೂ ಲಭ್ಯವಿರದಿದ್ದರೆ ಮೂರು ಬಾರಿ ಭೇಟಿ
ಸಂಪರ್ಕಕ್ಕಾಗಿ ಪಕ್ಕದ ಮನೆಯವರ ಸಹಾಯ ಪಡೆಯುವರು
ಮತದಾರು ಏನು ಮಾಡಬೇಕು?
ಗುರುತಿನ ಚೀಟಿಯಲ್ಲಿ ಭಾವಚಿತ್ರ ಅಸ್ಪಷ್ಟವಾಗಿದ್ದರೆ ಹೊಸ ಭಾವಚಿತ್ರ ನೀಡಬೇಕು
ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು
‘ಮನೆಯಲ್ಲಿ ಲಭ್ಯವಿಲ್ಲದವರು ಆನ್ಲೈನ್ನಲ್ಲೂ ಅರ್ಜಿ ಸಲ್ಲಿಸಬಹುದು.
ಗಂಭೀರ ಅಂಶಗಳು
ಎರಡು ಕಡೆ ಹೆಸರು ಇದ್ದರೆ ಫೋಟೊ ಸ್ಕ್ಯಾನಿಂಗ್ ಸಿಸ್ಟಮ್ ಮೂಲಕ ಪತ್ತೆ ಹಚ್ಚಿ ಕ್ರಮ
ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲು
ಪರಿಷ್ಕರಣೆ ನಂತರವೂ ಹೆಸರು ಸೇರದಿದ್ದರೆ ಬಿಎಲ್ಒಗಳು ಸಹಿ ಮಾಡಿ ನೀಡಿರುವ ನಮೂನೆ ಮೂಲಕ ಪ್ರಶ್ನಿಸಬಹುದು
ವಿಶೇಷ ಪರಿಷ್ಕರಣೆ ಕುರಿತು ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಿ, ವಿವರ ನೀಡಿಕೆ
ಪ್ರತಿ ಬೂತ್ಗೆ ಏಜೆಂಟ್ಗಳನ್ನು ನೇಮಕ ಮಾಡುವಂತೆ ಪಕ್ಷಗಳ ಮುಖಂಡರಿಗೆ ಸೂಚನೆ
ಗೌರವಧನ ಹೆಚ್ಚಳ
ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಗೌರವ ಧನವನ್ನು 6 ಸಾವಿರ ರೂ. ನಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಎಲ್ಒಗಳಿಗೆ ಹೆಚ್ಚುವರಿಯಾಗಿ 6 ಸಾವಿರ ರೂ. ನೀಡಲು ಆಯೋಗ ನಿರ್ಧರಿಸಿದೆ. ಬೂತ್ ಮಟ್ಟದಲ್ಲಿ ಪರಿಷ್ಕರಣೆಗೆ ಪ್ರತಿ ಬಿಎಲ್ಒಗಳಿಗೆ 30 ದಿನಗಳ ಕಾಲಾವಕಾಶವಿರಲಿದೆ, ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.





























































