ಕಾರ್ಕಳ : ಪರಿಶಿಷ್ಟ ಪಂಗಡದಲ್ಲಿ ಈಗಾಗಲೇ 52 ಸಮುದಾಯಗಳಿದ್ದು ಸರಕಾರದ ವಿಭಿನ್ನ ನಿಲುವು, ಧೋರಣೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಅದರಲ್ಲೂ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟು ಜನಾಂಗದವರ ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದು ಇದೆಲ್ಲವನ್ನು ಸರಕಾರ ಸೂಕ್ಷ್ಮವಾಗಿ ಗಮನಿಸದೇ ಪದೇ ಪದೇ ಹೊಸ ಹೊಸ ಜಾತಿಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹುನ್ನಾರವನ್ನು ಮಾಡುತ್ತಲೇ ಬಂದಿದೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಆರೋಪಿಸಿದ್ದಾರೆ.
ಹೊಸ ಜಾತಿಗಳ ಸೇರ್ಪಡೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಯೋಚನೆಯನ್ನು ಮಾಡದೆ ಸರಕಾರ ದ್ರೋಹ ಬಗೆದಿದೆ. ಸಾಂವಿಧಾನಿಕವಾಗಿ ಕನಿಷ್ಠ ಮಾನದಂಡಗಳು ಇಲ್ಲದಿದ್ದರೂ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಸ್ವತಹ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿದ್ದಾರೆ ಎಂದು ಶ್ರೀಧರ ಗೌಡ ಈದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



























































