ಕಾರ್ಕಳ : ಕಾರ್ಕಳದಲ್ಲಿನ ಬಿಎಸ್ಸಿ ನರ್ಸಿಂಗ್ ಕಾಲೇಜಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ಘಟಕದ ವತಿಯಿಂದ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಲೇಜು ಪ್ರಾರಂಭವಾಗಿ 4 ವರ್ಷಗಳೇ ಸಂದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಸುಸಜ್ಜಿತ ಕಟ್ಟಡವಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕರು, ಗುಮಾಸ್ತರು ಹಾಗೂ ಸ್ವಚ್ಛತಾ ಸಿಬ್ಬಂದಿಯಿಲ್ಲ. ಸರಿಯಾದ ತರಗತಿ ಕೊಠಡಿ, ಶೌಚಾಲಯಗಳ ವ್ಯವಸ್ಥೆಯಾಗಲೀ, ನರ್ಸಿಂಗ್ ವ್ಯಾಸಂಗಕ್ಕೆ ಬೇಕಾದ ಅತ್ಯಗತ್ಯ ಉಪಕರಣ, ಪ್ರಯೋಗಾಲಯ, ಗ್ರಂಥಾಲಯ ವ್ಯವಸ್ಥೆಯಾಗಲೀ ಇಲ್ಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಕಾಲೇಜಿನ ಆಡಳಿತ ಮಂಡಳಿ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ, ಕಲಿಕೆಗೆ ಉತ್ತಮ ವಾತಾವರಣ ಒದಗಿಸಿಕೊಡುವಂತೆ ಎಬಿವಿಪಿ ಮನವಿಯಲ್ಲಿ ಮನವಿ ಮಾಡಿಕೊಂಡಿದೆ. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ, ಉಡುಪಿ ಜಿಲ್ಲಾ ಸಂಚಾಲಕ ಶ್ರೇಯಸ್ ಅಂಚನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿಎಸ್ಸಿ ನರ್ಸಿಂಗ್ ಕಾಲೇಜಿನ ಸಮಸ್ಯೆ ನಿವಾರಣೆಗಾಗಿ ಎಬಿವಿಪಿಯಿಂದ ಮನವಿ









































