ಉಡುಪಿ : ಈಜಲು ತೆರಳಿದ್ದ 9 ಮಂದಿಯಲ್ಲಿ ಮೂವರು ನೀರು ಪಾಲಾದ ಘಟನೆ ಸೆ. 7ರಂದು ಕುಂದಾಪುರ ತಾಲೂಕಿನ ಗೋಪಾಡಿ ಬೀಚ್ನಲ್ಲಿ ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿದ್ದ ಓರ್ವನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರಿನಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಭಾಸಿಯ ಲಾಡ್ಜಿನಲ್ಲಿ ತಂಗಿದ್ದರು. ಭಾನುವಾರ ಮಧ್ಯಾಹ್ನ 9 ಮಂದಿ ಯುವಕರು ಸಮುದ್ರ ಸ್ನಾನ ಮಾಡಲೆಂದು ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ನಾಲ್ವರು ಸಮುದ್ರದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು. ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಓರ್ವನನ್ನು ತಕ್ಷಣ ಸ್ಥಳೀಯರು ಹಾಗೂ ಜೊತೆಗೆ ಇದ್ದ ಯುವಕರು ಸೇರಿ ಮೇಲಕೆತ್ತಿ ರಕ್ಷಿಸಿದ್ದಾರೆ. ಬಳಿಕ ಆತನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಸ್ಥಳೀಯರ ಸಹಕಾರದಿಂದ ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಇನ್ನೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಮುದ್ರಕ್ಕೆ ಈಜಲು ತೆರಳಿದ್ದ ಮೂವರು ನೀರುಪಾಲು







































