ನನ್ನ ಮತ್ತು ಕಾಂಗ್ರೆಸ್ ಸಂಬಂಧ ಭಕ್ತ ಮತ್ತು ಭಗವಂತನ ಸಂಬಂಧ

ಬೆಂಗಳೂರು : ನಾನು ಏನು ತಪ್ಪು ಮಾಡಿಲ್ಲ. ಆರ್‌ಎಸ್‌ಎಸ್‌ ಗೀತೆ ಹಾಡು ಹಾಡಿದ್ದಕ್ಕೆ ನೋವಾಗಿದ್ರೆ ನನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ, ಪಕ್ಷದ ನಾಯಕರಿಗೆ, ಇಂಡಿಯಾ ಕೂಟಾದ ನಾಯಕರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಗೀತೆಯ ನಮಸ್ತೇ ಸದಾ ವತ್ಸಲೇ ಸಾಲುಗಳನ್ನು ವಿಧಾನಸಭೆ ಕಲಾಪದ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು. ಅದು ಸಾಕಷ್ಟು ಸದ್ದು ಮಾಡಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ವತಃ ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಕೆ ಹರಿಪ್ರಸಾದ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆರ್​​ಎಸ್​​ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ.

ನಾನು ಯಾರಿಗೂ ಹೆದರಿಲ್ಲ ಮತ್ತು ಹೆದರಿ ಕ್ಷಮೆ ಕೇಳುತ್ತಿಲ್ಲ. ಪಾಸಿಂಗ್ ರೆಫರೆನ್ಸ್‌ನಲ್ಲಿ ಆ ಹಾಡು ಹೇಳಿದ್ದೇನೆ. ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ಎಂದು ಖಡಕ್ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಉತ್ತರ ನೀಡುವಾಗ, ಆರ್‌ಎಸ್ಎಸ್ ಸಿದ್ಧಾಂತದ ಅರಿವಿದೆ ಎಂದು ಕಾಲೆಳೆದೆ ಅಷ್ಟೆ. ಅದು ಬಿಟ್ಟರೆ ಇನ್ನೇನಿಲ್ಲ ಎಂದರು.

ನಾನು ಕಾಂಗ್ರಸ್ ಪಕ್ಷದಲ್ಲಿದ್ದೇನೆ ನಿಜ. ಹಾಗೆಂದು ನನ್ನ ಧರ್ಮ ನಾನು ಬಿಡಲ್ಲ. ನನ್ನ ಧರ್ಮದ ಜತೆಗೆ ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ. ಮುಸ್ಲಿಂ, ಕ್ರಿಶ್ಚಿಯನ್ ಇತರ ಧರ್ಮಗಳ ಬಗ್ಗೆಯೂ ಗೌರವ ಇದೆ. ಆದರೆ, ಇವೆಲ್ಲದಕ್ಕಿಂತಲೂ ಮಾನವ ಧರ್ಮದ ಮೇಲೆ ನಾನು ಹೆಚ್ಚು ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದರು.

ಪಕ್ಷದಲ್ಲಿ ವಿರೋಧ ಮಾಡಿರೋದು ನನ್ನ ಹಿತೈಷಿಗಳಾಗಿದ್ದು, ಹರಿಪ್ರಸಾದ್ ಅವರ ಸಲಹೆ ಪಡೆಯುತ್ತೇನೆ. ಇಲ್ಲಿಗೆ ಬರುವ ಮುನ್ನ ಮಂಜುನಾಥನ ಬೊಟ್ಟು ಇಟ್ಟುಕೊಂಡಿದ್ದೇನೆ. ಬೆಳಗ್ಗೆ ಎದ್ದರೆ ಅಜ್ಜಯ್ಯ ನೋಡ್ತೀನಿ. ಫಾದರ್, ಮೌಲ್ವಿಗಳನ್ನು ಭೇಟಿಯಾಗುತ್ತೇನೆ. ನಾನು ಜಾತ್ಯಾತೀತ ವ್ಯಕ್ತಿ ಎಂದರು.

ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ. ಆದರೆ, ಒಂದು ವಿಚಾರ ಸ್ಪಷ್ಟ ಇರಲಿ. ಯಾರೂ ನನ್ನನ್ನು ಪ್ರಶ್ನೆ ಮಾಡಿಲ್ಲ. ಹೈಕಮಾಂಡ್ ಕೂಡ ಕೇಳಿಲ್ಲ. ಈ ವಿಚಾರ ಇಲ್ಲಿಗೆ ಮುಗಿಸೋಣ. ನನ್ನ ಮತ್ತು ಕಾಂಗ್ರೆಸ್ ಸಂಬಂಧ ಭಕ್ತ ಮತ್ತು ಭಗವಂತನ ಸಂಬಂಧದಂತೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.























































































































error: Content is protected !!
Scroll to Top