ಕಾರ್ಕಳ : ಬಿಂಬ ಪ್ರಕಾಶನ ಸಮೂಹ ಮಾಧ್ಯಮ ಸಂಸ್ಥೆಗಳ ಮಾಲಕ ವಸಂತ್ ಕುಮಾರ್ ಅವರಿಗೆ ಲೇಖಕ ಹಾಗೂ ಸಾಹಿತಿ ಡಿ. ವಿ. ಜಿ. ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗಿದೆ. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಬೆಂಗಳೂರು ವತಿಯಿಂದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ, ವಿನಯ್ ಗುರೂಜಿ, ಬೇರುಗುಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ. ಎನ್. ಮಹೇಶ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯೇಶಾ ಖಾನಂ, ಹೈಕೋರ್ಟ್ ನ್ಯಾಯವಾದಿ ಅಮ್ರತೇಶ್, ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಹಾಗೂ ಟಿ. ಪಿ ಕೃಷ್ಣನ್ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಣೆಯಾಯಿತು.
ಮೂಲತ: ಬೆಳ್ತಂಗಡಿಯವರಾದ ವಸಂತ್ ಕುಮಾರ್ ಸುದ್ದಿ ಬಿಡುಗಡೆ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿ, 1996ರಲ್ಲಿ ಕಾರ್ಕಳದಲ್ಲಿ ಬಿಂಬ ಪ್ರಕಾಶನದ ಮೂಲಕ ಹೊಸದೊಂದು ಪತ್ರಿಕೆ ಹೊರತರಲು ಮುಂದಾದರು. ಮಾಧ್ಯಮ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಳ್ಳದೇ ಕೆಲವೊಂದು ಚಳುವಳಿಯಲ್ಲೂ ಪಾಲ್ಗೊಂಡಿದ್ದರು. ಕೊಲ್ಲೂರಿನ ಕೊಡಚಾದ್ರಿ ಉಳಿಸಿ ಆಂದೋಲನದಲ್ಲಿ ಸಮಿತಿ ವಕ್ತಾರರಾಗಿ, ಪಶ್ಚಿಮ ಘಟ್ಟದಲ್ಲಿ ಸಕ್ರಿಯವಾಗಿದ್ದ ನಕ್ಸಲ್ ಚಳುವಳಿಯ ಬಗ್ಗೆ 2002ರಿಂದಲೇ ನಿರಂತರ ವರದಿ ಪ್ರಕಟಿಸಿದ್ದರು. ಕುದುರೆ ಮುಖದಲ್ಲಿ ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದರು. 2003ನೇ ಸಾಲಿನಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, 2004 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಕೂಡಾ ಸೇವೆ ಸಲ್ಲಿಸಿದ್ದರು.
31 ವರ್ಷಗಳ ಸುಧೀರ್ಘ ಪತ್ರಿಕಾ ಹಾದಿಯಲ್ಲಿ ಅವರಿಗೆ ಹಲವಾರು ಪ್ರಶಸ್ತಿಗಳು ಪ್ರಾಪ್ತವಾಗಿದೆ. 2012ರಲ್ಲಿ ಗಡಿನಾಡ ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, ಕೊಪ್ಪಳದಲ್ಲಿ ಕವಿ ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, 2018ನೇ ಸಾಲಿನಲ್ಲಿ ಮಂಗಳೂರಿನಲ್ಲಿ ಜಿಲ್ಲಾ ಸಾಧಕ ಪುರಸ್ಕಾರ, 2023 ನೇ ಸಾಲಿನಲ್ಲಿ ಸಕಲೇಶಪುರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2024ನೇ ಸಾಲಿನಲ್ಲಿ ತಮಿಳ್ನಾಡಿನಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘದ ಸಮ್ಮೇಳನದಲ್ಲಿ ಪುರಸ್ಕಾರ ಲಭಿಸಿದೆ. ಪ್ರಸ್ತುತ ಬಿಂಬ ಪ್ರಕಾಶನದ ಕಾರ್ಕಳ, ಮೂಡುಬಿದಿರೆ, ಹೆಬ್ರಿ ತಾಲೂಕು ಒಳಗೊಂಡಂತೆ ಮಾಧ್ಯಮ ಬಿಂಬ ಪತ್ರಿಕೆ ಹಾಗೂ ವೆಬ್ ಸೈಟ್, ಸ್ವಯಂ ಟೈಮ್ಸ್ ನ್ಯೂಸ್, ಲೈವ್ ಹಾಗೂ ಸಕಲೇಶಪುರ ಹಾಗೂ ಆಲೂರುನಲ್ಲಿ ಮಲ್ನಾಡ್ ಶ್ಯಾಡೋ ಡಿಜಿಟಲ್ ಮಾಧ್ಯಮ ಮುನ್ನಡೆಸುತ್ತಿದ್ದಾರೆ.




























































