ಶಿವಮೊಗ್ಗ : ಹಾಳಾಗಿ ನಿಂತಿದ್ದ ಲಾರಿಗೆ ಹಿಂದಿನಿಂದ ದುರ್ಗಾಂಬ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಗಾಜನೂರು ಅಗ್ರಹಾರ ಬಳಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಈ ಅಪಘಾತ ನಡೆದಿದೆ. ಬಸ್ ಮಂಗಳೂರಿನಿಂದ ರಾತ್ರಿ ಹೊರಟಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ತಲುಪಬೇಕಿತ್ತು. ಅಪಘಾತದಲ್ಲಿ ಬಸ್ಸಿನ ನಿರ್ವಾಹಕ, ಹೊಸನಗರದ ಅಣ್ಣಪ್ಪ (38) ಹಾಗೂ ಪ್ರಯಾಣಿಕ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಹರ್ಷಿತ್ (25) ಸ್ಥಳದಲ್ಲಿಯೇ ಮೃತಪಟ್ಡಿದ್ದಾರೆ. ಅಣ್ಣಪ್ಪ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು ಎಂದು ತಿಳಿದು ಬಂದಿದೆ.
ಮೂವರ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 13 ಜನ ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸೇರಿ ವಿವಿಧೆಡೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಬಸ್ಸಿನ ಎಡ ಭಾಗ ಸಂಪೂರ್ಣ ಹಾನಿಯಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತದಿಂದಾಗಿ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.





























































