ಇಂದಿನಿಂದ ಮ್ಯಾಂಚೆಸ್ಟರ್‌ನಲ್ಲಿ 4ನೇ ಟೆಸ್ಟ್‌ ಪಂದ್ಯಾಟ

ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಇಂದಿನಿಂದ (ಜು. 23) ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ.

ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ಸರಣಿ ಗೆಲ್ಲಲು ಇನ್ನೊಂದು ಗೆಲುವಿನ ಅಗತ್ಯವಿದೆ. ಆದರೆ ಭಾರತ ಸರಣಿ ಗೆಲ್ಲಲು ಇನ್ನುಳಿದ ಎರಡೂ ಪಂದ್ಯಗಳನ್ನೂ ಗೆಲ್ಲಬೇಕಾಗಿದೆ. ಆದ್ದರಿಂದ ಇಂದಿನ ಪಂದ್ಯಾಟದಲ್ಲಿ ಟೀಮ್‌ ಇಂಡಿಯಾ ಗೆಲುವು ಅಥವಾ ಡ್ರಾ ಸಾಧಿಸುವುದು ಅನಿವಾರ್ಯವಾಗಿದೆ.

ಟೀಮ್‌ ಇಂಡಿಯಾದ ಮೂವರು ಅಲಭ್ಯ
ಮ್ಯಾಂಚೆಸ್ಟರ್‌ ಪಂದ್ಯಕ್ಕೆ ಟೀಂ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. 3ನೇ ಟೆಸ್ಟ್ ಪಂದ್ಯದ ಬಳಿಕ ನಡೆದ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್‌ ಅವರ ಕೈಗೆ ಗಾಯವಾಗಿದ್ದು, ಹೀಗಾಗಿ ಪಂದ್ಯದಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದ ವೇಗಿ ಆಕಾಶ್ ದೀಪ್ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾರ್ಡ್ಸ್​ ಟೆಸ್ಟ್ ಪಂದ್ಯದ 4ನೇ ದಿನದಾಟದಂದು ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 8 ಓವರ್​ಗಳನ್ನು ಮಾತ್ರ ಎಸೆದಿದ್ದರು. ಇನ್ನು ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಜಿಮ್​ನಲ್ಲಿನ ತರಬೇತಿ ವೇಳೆ ಮೊಣಕಾಲಿಗೆ ಗಾಯವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ. ಹೀಗಾಗಿ ಜಸ್ಪ್ರೀತ್‌ ಬುಮ್ರಾ ಟೀಂ ಇಂಡಿಯಾ ಬೌಲಿಂಗ್‌ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ 1936ರಿಂದ ಟೆಸ್ಟ್‌ ಆಡುತ್ತಿದೆ. ಆದರೆ ಒಮ್ಮೆಯೂ ಗೆದ್ದಿಲ್ಲ. 9 ಪಂದ್ಯಗಳ ಪೈಕಿ 4ರಲ್ಲಿ ಸೋತಿದ್ದರೆ, 5 ಡ್ರಾಗೊಂಡಿದೆ. ಇಂಗ್ಲೆಂಡ್‌ ಮ್ಯಾಂಚೆಸ್ಟರ್‌ನಲ್ಲಿ 86 ಟೆಸ್ಟ್‌ ಆಡಿದೆ. 35ರಲ್ಲಿ ಗೆದ್ದಿದ್ದು, 15ರಲ್ಲಿ ಸೋತಿದೆ. 36 ಪಂದ್ಯ ಡ್ರಾಗೊಂಡಿವೆ. ಟೀಂ ಇಂಡಿಯಾ ಇಲ್ಲಿ ಕೊನೆ ಬಾರಿ ಆಡಿದ್ದು 2014ರಲ್ಲಿ. ಆ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 54 ರನ್‌ನಿಂದ ಸೋತಿತ್ತು.

ತೆಂಡೂಲ್ಕರ್‌ ಕೊನೆಯ ಶತಕ
ಸಚಿನ್‌ ತೆಂಡೂಲ್ಕರ್‌ ಅವರು ಈ ಮೈದಾನದಲ್ಲಿ ಶತಕ ಬಾರಿಸಿದ ಕೊನೆಯ ಭಾರತೀಯ ಬ್ಯಾಟರ್‌. ಅವರ ಬಳಿಕ ಇದುವರೆಗೂ ಯಾರೂ ಶತಕ ಬಾರಿಸಿಲ್ಲ. ವಿಶೇಷ ಎಂದರೆ ಅದು ಸಚಿನ್‌ ಬಾರಿಸಿದ ಮೊದಲ ಅಂತರಾಷ್ಟ್ರೀಯ ಶತಕವಾಗಿತ್ತು.































































































error: Content is protected !!
Scroll to Top