ಬೋಳ ಗ್ರಾಮ ಸಭೆಯಲ್ಲಿ ಬಿಜಿಪಿ ಸದಸ್ಯರಿಂದ ಗ್ಯಾರಂಟಿ ಅನುಷ್ಠಾನಕ್ಕೆ ವಿರೋಧ – ಕಾಂಗ್ರೆಸ್‌ ಪ್ರತಿಭಟನೆ

ಕಾರ್ಕಳ : ಗ್ಯಾರಂಟಿ ಯೋಜನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡ ಜನರ ಬಗ್ಗೆ ಇರುವ ವಿಶೇಷ ಕಾಳಜಿ ಅಡಕವಾಗಿದೆ. ಜನರ ಜೀವನ ಮಟ್ಟ ಸುಧಾರಣೆಗಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎನ್ನುತ್ತಿರುವ ಬೋಳ ಪಂಚಾಯತ್‌ ಸದಸ್ಯರ ನಡೆ ಖಂಡನೀಯ. ಮುಂದಿನ ದಿನಗಳಲ್ಲಿ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಗ್ಯಾರಂಟಿ ಅದಾಲತ್ ನಡೆಸಲಾಗುವುದು ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ ಹೇಳಿದರು.

ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಬೋಳ ಗ್ರಾಮದಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಸದಸ್ಯರ ವಿರುದ್ಧ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಬೋಳ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಜು.22ರಂದು ಬೋಳ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌ ಮಾತನಾಡಿ, ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಬೇಡವಾದರೆ ಬೇಡವೆಂದು ಅರ್ಜಿ ಸಲ್ಲಿಸಿ. ಅದನ್ನು ಬಿಟ್ಟು ಬಡಜನರ ಅನುಕೂಲಕ್ಕಾಗಿ ರಾಜ್ಯ ಕಾಂಗ್ರೆಸ್‌ ಸರಕಾರ ನೀಡಿದ ಯೋಜನೆಯನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳನ್ನು ವಿರೋದಿಸುತ್ತೇವೆ ಎಂದ ಬಿಜೆಪಿ ಪಂಚಾಯತ್ ಸದಸ್ಯರ ಮಾತನ್ನು ಖಂಡಿಸಿ ಇಂದು ಬೋಳ ಪಂಚಾಯತ್‌ ಕಚೇರಿ ಬಾಗಿಲಿಗೆ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಇದೇ ಉದ್ದಟತನ ತೋರಿದರೆ ನಿಮ್ಮ ಮನೆ ಬಾಗಿಲಿಗೆ ಬರಬೇಕಾದೀತು ಎಂದು ಎಚ್ಚರಿಕೆ ನೀಡಿದರು.

9/11 ಸಮಸ್ಯೆ ಬಗ್ಗೆ ಬಿಜೆಪಿ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಈ ಸಮಸ್ಯೆಗೆ ಕಾರಣ ನಿಮ್ಮದೇ ಅಂದಿನ ಬಿಜೆಪಿ ಸರಕಾರ. ಅಲ್ಲದೆ ಬಿಜೆಪಿ ಸರಕಾರ ಅಕ್ರಮ ಸಕ್ರಮ ಅರ್ಜಿ ತಿರಸ್ಕಾರದ ಅಧಿಕಾರವನ್ನು 2020ರಲ್ಲಿ ಜಿಲ್ಲಾಧಿಕಾರಿಯವರಿಗೆ ನೀಡುವ ಮೂಲಕ ಇಂದು ಅಕ್ರಮ ಸಕ್ರಮ ಕುರಿತಾದ ಸಮಸ್ಯೆಗೆ ಕಾರಣವಾಗಿದೆ. ಇನ್ನು ವಿದ್ಯುತ್‌ ಬೆಲೆಯ ಏರಿಕೆಗೆ ಅಂದಿನ ಬಿಜೆಪಿ ಸರಕಾರದ ಇಂಧನ ಸಚಿವ ಸುನಿಲ್‌ ಕುಮಾರ್‌ ಅವರೇ ಕಾರಣ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಪ್ರಿತ್ ಶೆಟ್ಟಿ ಕೆದಿಂಜೆ ಮಾತನಾಡಿ, ಗ್ರಾಮ ಪಂಚಾಯತ್ ಸದಸ್ಯರು ಜನರ ಸೇವಕರಾಗಿ ಸರಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸುವ ಕೆಲಸ ಮಾಡಬೇಕು. ಆದರೆ, ಬೋಳದಲ್ಲಿ ಗ್ರಾಮ ಸಭೆಯಲ್ಲೇ ಬಿಜೆಪಿ ಸದಸ್ಯರು ರಾಜ್ಯ ಸರಕಾರದ ಗ್ಯಾರಂಟಿ ಸವಲತ್ತುಗಳಿಗೆ ತಡೆಯೊಡುತ್ತೇನೆ ಎಂದು ಹೇಳಿರುವುದು ಮೂರ್ಖತನ. ಅವರು ರಾಜಕಾರಣದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಹೇಳಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅವಿನಾಶ್ ಮಲ್ಲಿ ಮಾತನಾಡಿ, ನಾನೂ ಕೂಡ ಪಂಚಾಯತ್‌ ಅಧ್ಯಕ್ಷನಾಗಿ ಜನ ಸೇವೆ ಮಾಡಿದವನು, ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಕಾಂಗ್ರೆಸ್ ಬಿಜೆಪಿ ಎನ್ನುವ ಭೇದ ಭಾವ ಮಾಡಿಲ್ಲ. ಆದರೆ, ಇಂದು ಬಿಜೆಪಿ ಸದಸ್ಯರ ಪಕ್ಷಭೇದ ನೀತಿಯಿಂದಾಗಿ ನಮ್ಮದೇ ಊರಿನ ಪಂಚಾಯತ್ ಮುಂದೆ ಪ್ರತಿಭಟನೆ ಮಾಡುವಂತಹ ಪರಿಸ್ಥಿತಿ ಬಂದಿರುವುದು ಗ್ರಾಮದ ಜನರ ದೌರ್ಭಾಗ್ಯ, ಈ ಸ್ಥಿತಿಗೆ ಕಾರಣರಾದ ಬಿಜೆಪಿಗರು ಗ್ರಾಮಸ್ಥರಿಗೆ ಕ್ಷಮೆ ಕೇಳಬೇಕು ಎಂದರು.

ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಅನಿತಾ ಡಿಸೋಜ, ಕೆ.ಎಂ.ಎಫ್‌. ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕಿಶೋರ್, ದೀಕ್ಷಿತ್ ದೇವಾಡಿಗ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಆಚಾರ್ಯ ಇನ್ನಾ, ಮಂಜುನಾಥ ಜೋಗಿ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಯುವ ಕಾಂಗ್ರೆಸ್ ಅಸೆಂಬ್ಲಿ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಅತ್ತೂರು, ಕಾಂತಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ. ಸುದರ್ಶನ್ ಬಂಗೇರ, ಚಂದ್ರಹಾಸ ಪುತ್ರನ್, ರೊನಾಲ್ಡ್ ಅಲೊನ್ಸ್, ಡೆನಿಸ್, ಗಣೇಶ್ ಮೂಲ್ಯ, ಸುರೇಶ್ ಮಸ್ಕರೇನಸ್, ಶಂಕರ ಮೂಲ್ಯ, ಗೀತಾ, ದೀಕ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ, ಹೇಮಂತ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಗ್ಯಾರಂಟಿ ಸಮಿತಿಯ ಸದಸ್ಯ ಸಂತೋಷ್ ದೇವಾಡಿಗ ಸ್ವಾಗತಿಸಿ, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮೀಣ ಕಾಂಗ್ರೆಸ್ ಬೋಳ ಸಮಿತಿಯ ಅಧ್ಯಕ್ಷ ಯೋಗೀಶ್ ಮೂಲ್ಯ ವಂದಿಸಿದರು.































































































error: Content is protected !!
Scroll to Top