ದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಗೈರು
ಸುಪ್ರೀಂ ಕೋರ್ಟ್‌ಗೆ ದರ್ಶನ್ ಪರ ವಾದ ಮಂಡಿಸಲು ಇಂದು ಹಾಜರಾಗಬೇಕಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಗೈರಾಗಿದ್ದರು. ದರ್ಶನ್ ಪರ ವಕೀಲ ಸಿದ್ಧಾರ್ಥ ದವೆ ಹಾಜರಾಗಿದ್ದರು. ಕಪಿಲ್ ಸಿಬಲ್ ಅವರು ಗೈರಾಗಿದ್ದರಿಂದ, ಕೇಸ್ ಬಗ್ಗೆ ಅಧ್ಯಯನ ಮಾಡಲು ಸ್ವಲ್ಪ ಕಾಲವಕಾಶವನ್ನು ಸಿದ್ಧಾರ್ಥ ದವೆ ಕೇಳಿದರು. ಕೆಲಕಾಲವಷ್ಟೇ ವಾದ ಮಂಡನೆಗೆ ನ್ಯಾಯಾಲಯ ಅವಕಾಶ ನೀಡಿತು. ಅಲ್ಲದೇ ಲಿಖಿತ ರೂಪದಲ್ಲಿ ವಾದ ಮಂಡಿಸಲು ಸೂಚನೆ ನೀಡಿ ಗುರುವಾರಕ್ಕೆ ವಿಚಾರಣೆ ಮುಂದೂಡಲಾಯಿತು.
ಕಳೆದ ಗುರುವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಪೀಠವು, ಹೈಕೋರ್ಟ್ ತನ್ನ ವಿವೇಚನೆ ಚಲಾಯಿಸಿದ ರೀತಿ ತನಗೆ ಮನದಟ್ಟಾಗಿಲ್ಲ ಎಂದು ಹೇಳಿತ್ತು. ಬಳಿಕ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತ್ತು. ಇದೀಗ ಮತ್ತೆ ವಿಚಾರಣೆ ಮುಂದೂಡಿಕೆಯಾಗಿದೆ.




















