ಕರ್ನಾಟಕ ರಾಜ್ಯದೊಳಗಿನ ಪ್ರದೇಶದಲ್ಲಿ ವಿವಿಧ ಸಹಕಾರ ಸಂಘಗಳ ರಚನೆ, ಅದರ ಕಾರ್ಯ ನಿರ್ವಹಣೆ ಮತ್ತು ನಿಯಂತ್ರಣದ ಉದ್ದೇಶಕ್ಕಾಗಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಎಂಬ ಕಾನೂನು ಜಾರಿಯಲ್ಲಿರುತ್ತದೆ. ಇದರ ಪ್ರಕಾರ ಯಾವುದೇ ಒಂದು ಸಹಕಾರಿ ಸಂಘದ ದೈನಂದಿನ ವ್ಯವಹಾರವನ್ನು ನಡೆಸುವುದಕ್ಕಾಗಿ ಒಂದು ನಿರ್ದೇಶಕರ ಮಂಡಳಿಯ ಅಗತ್ಯವಿರುತ್ತದೆ. ಇದಕ್ಕಾಗಿ ಸಹಕಾರ ಚುನಾವಣಾ ಪ್ರಾಧಿಕಾರದ ಅಧೀಕ್ಷಣೆಯಲ್ಲಿ ಸಹಕಾರಿ ಸಂಘದ ಆಡಳಿತ ಮಂಡಳಿಯನ್ನು ರಚಿಸುವುದಕ್ಕಾಗಿ ಚುನಾವಣೆಯನ್ನು ನಡೆಸಬೇಕಾಗುತ್ತದೆ. ಇದಕ್ಕಾಗಿ ಸಂಬಂಧಪಟ್ಟ ಸಹಕಾರ ಸಂಘದ ಎಲ್ಲಾ ಸದಸ್ಯರ ವಿವರಗಳೊಂದಿಗೆ ಮತದಾರರ ಪಟ್ಟಿಯನ್ನು ಮತ್ತು ಇತರ ಪೂರ್ವ ಸಿದ್ಧತಾ ಕಾರ್ಯವನ್ನು ಮತದಾನದ ದಿನಾಂಕಕ್ಕಿಂತ ಕೊನೆಯ 6 ತಿಂಗಳ ಅವಧಿಯಲ್ಲಿ ಪ್ರಾರಂಭಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಅವಧಿಯು 5 ವರ್ಷದ್ದಾಗಿರುತ್ತದೆ. ಪ್ರತಿಯೊಂದು ಸಹಕಾರ ಸಂಘವು ಕನಿಷ್ಟ ವರ್ಷಕ್ಕೊಮ್ಮೆ ತನ್ನ ಸದಸ್ಯರ ಸಾಮಾನ್ಯ ಸಭೆಯನ್ನು ನಡೆಸಿ ಸಹಕಾರ ಸಂಘದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಲೆಕ್ಕ ಪರಿಶೋಧನಾ ವರದಿ, ವಿಚಾರಣಾ ವರದಿ, ನಿವ್ವಳ ಲಾಭ ನಷ್ಟಗಳ ವರದಿ, ಕಾರ್ಯಚರಣೆಯಲ್ಲಿ ಕೊರತೆ ಏನಾದರೂ ಇದ್ದರೆ ಅದರ ಪುನರವಲೋಕನ ಮತ್ತು ಕೊರತೆಯನ್ನು ಕಡಿಮೆ ಮಾಡಲು ಹಮ್ಮಿಕೊಳ್ಳಬೇಕಾಗಿರುವ ವಿವಿಧ ಕಾರ್ಯಕ್ರಮಗಳ ಅನುಮೋದನೆ, ವಾರ್ಷಿಕ ಬಜೆಟ್‌ನ ಅನುಮೋದನೆ, ನಿರ್ದಿಷ್ಟ ಮೀಸಲು ಮತ್ತು ಇತರ ಸೃಜನೆ, ಇತರ ಸಹಕಾರ ಸಂಘಗಳಲ್ಲಿ ಸಹಕಾರ ಸಂಘದ ಸದಸ್ಯತ್ವದ ಅನುಮೋದನೆ, ಯಾವುದೇ ಪೂರಕ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಯಾವುದಾದರೂ ಇದ್ದರೆ ಅವುಗಳ ಪುನರವಲೋಕನ, ಮಂಡಳಿಯ ಸದಸ್ಯರ ಅಥವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಕರ ಬಂಧುಗಳಾಗಿದ್ದು ಸಹಕಾರ ಸಂಘದಲ್ಲಿ ನೇಮಕ ಹೊಂದಿದ ನೌಕರರ ಪಟ್ಟಿಯ ಪರಿಶೀಲನೆ, ಉಪವಿಧಿಗಳ ತಿದ್ದುಪಡಿ, ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಮತ್ತು ನೌಕರರಿಗಾಗಿ ವರ್ತನ ಸಂಹಿತೆಯ ರಚನೆ, ಸಂಘದ ಸದಸ್ಯರಿಂದ ಮತ್ತು ನಿರ್ದೇಶಕರಿಂದ ಸಂಘದ ಸೇವೆಗಳ ಬಳಕೆಯ ಬಗ್ಗೆ ವಿಮರ್ಶೆ, ನಿರ್ದೇಶಕರಿಗೆ ಮತ್ತು ಅವರ ಸಂಬಂಧಿಕರಿಗೆ ನೀಡಲಾದ ಸಾಲಗಳು ಮತ್ತು ಮುಂಗಡಗಳ ಸುಸ್ತಿಬಾಕಿ ಯಾವುದಾದರೂ ಇದ್ದರೆ ಅವುಗಳ ವಿವರ ಮತ್ತು ವಸೂಲಿಗಗಿ ಕೈಗೊಂಡ ಕ್ರಮದ ಪರಿಶೀಲನೆ, ವಿಚಾರಣಾ ಮತ್ತು ಪರಿವೀಕ್ಷಣಾ ವರದಿಯಲ್ಲಿ ತೋರಿಸಲಾಗಿರುವ ದೋಷಗಳನ್ನು ಸರಿಪಡಿಸುವ ಬಗ್ಗೆ ಮತ್ತು ಈ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಮಂಡಳಿಯು ನೀಡಿರುವ ಅನುಸರಣಾ ವರದಿಯ ಪರಿಶೀಲನೆ, ಲೆಕ್ಕಪರಿಶೋಧಕರ ನೇಮಕಾತಿ, ಸ್ವಯಂಪ್ರೇರಿತಾ ಒಟ್ಟುಗೂಡುವಿಕೆ, ವಿಭಜನೆ, ವಿಲೀನತೆ ಮತ್ತು ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವರ್ಗಾವಣೆ, ವಸೂಲಾಗದ ಸಾಲಗಳಿಗೆ ಸಂಬಂಧಪಟ್ಟಂತೆ ಸೂಕ್ತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನ, ನಿರ್ದೇಶಕರು ಮತ್ತು ಇತರ ಪದಾಧಿಕಾರಿಗಳು ನಿರ್ವಹಿಸಿದ ಕರ್ತವ್ಯಗಳಿಗೆ ಸಂಬಂಧಪಟ್ಟಂತೆ ಅವರಿಗೆ ಸಂದಾಯ ಮಾಡಿದ ಸಂಭಾವನೆ, ಪ್ರಯಾಣ ಭತ್ಯೆ, ದಿನ ಭತ್ಯೆ ಮತ್ತು ಇತರ ಭತ್ಯೆಗಳ ವಿರ್ಮಶೆ, ಮೀಸಲು, ಅಥವಾ ಇತರ ನಿಧಿಗಳ ವಾಸ್ತವಿಕ ಬಳಕೆಯ ವಿಮರ್ಶೆ, ಸಹಕಾರ ಸಂಘದ ಸಮಾಪನೆ ಮತ್ತು ಸಹಕಾರ ಸಂಘದ ಉಪವಿಧಿಗಳಿಗನುಸಾರವಾಗಿ ಮಂಡಿಸಬಹುದಾದ ಇತರ ಯಾವುದೇ ವಿಷಯಗಳ ಬಗ್ಗೆ ಪರಿಶೀಲನೆ ಇತ್ಯಾದಿ ವಿಷಯಗಳ ಬಗ್ಗೆ ತೀರ್ಮಾನಿಸಬಹುದಾಗಿದೆ.






















