ದಾಂಡೇಲಿ : ಕಾಂಗ್ರೆಸ್ ಸರಕಾರದ ಉಚಿತ ಯೋಜನೆಗಳ ಬಗ್ಗೆ ವಿರೋಧ ಪಕ್ಷ ಮಾತ್ರವಲ್ಲದೆ ಪ್ರತಿಪಕ್ಷಗಳಿಂದಲೂ ಆಗಾಗ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಇದೀಗ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಉಚಿತ ಕೊಡುಗೆ ಎಂಬುದು ಅಪಾಯಕಾರಿ ಎಂದು ಹೇಳುವ ಮೂಲಕ ಉಚಿತ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬೇವಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆ ಎಂಬುದು ಅಪಾಯಕಾರಿ ಪದ. ಜನರಿಗೆ ಏನನ್ನೂ ಉಚಿತವಾಗಿ ನೀಡಬಾರದು ಮತ್ತು ಪ್ರತಿಯೊಂದು ಸೇವೆಗೂ ಶುಲ್ಕ ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಆನಂದಿಸುತ್ತಿದ್ದಾರೆ. ಈ ಯೋಜನೆಯನ್ನು ಪುರುಷರಿಗೂ ವಿಸ್ತರಿಸಬೇಕೆಂಬ ಬೇಡಿಕೆ ಇತ್ತು. ಎಲ್ಲವನ್ನೂ ಉಚಿತವಾಗಿ ನೀಡಿದರೆ ನಾವು ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.







































