ಕಾರ್ಕಳ : ಕಂಬಳ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧಿ ಪಡೆದಿದೆ. ಕೃಷಿಯ ವಿರಾಮದ ಸಮಯದಲ್ಲಿ ಈ ಜಾನಪದ ಕ್ರೀಡೆ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸುವುದು ಮಾರ್ಯಾದೆಯ ಪ್ರಶ್ನೆ ಎಂಬ ರೀತಿಯಲ್ಲಿ ಇಲ್ಲಿ ಕಂಬಳ ಕೂಟಗಳು ನಡೆಯುತ್ತಿದೆ. ಸಮಸ್ತ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಕಂಬಳಕ್ಕಿದ್ದು, ಜಾತಿ, ಮತ ಪಂಥವನ್ನು ಮೀರಿ ಅತ್ಯಂತ ಸಂತೋಷದಿಂದ ಸಮಸ್ತ ಸಮಾಜ ಭಾಗವಹಿಸುತ್ತದೆ. ಈ ನಿಟ್ಟಿನಲ್ಲಿ ಕಂಬಳವನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.
ಅವರು ಮಾ. 15ರಂದು ಸಂಜೆ ನಡೆದ 21ನೇ ವರ್ಷದ ಮಿಯ್ಯಾರು ಲವ ಕುಶ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಂಬಳದಂತಹ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಪುನರುತ್ಥಾನದ ಜೊತೆಗೆ ಧಾರ್ಮಿಕ ಮನೋಭಾವ ಜಾಗೃತವಾಗಿ ಜಗತ್ತಿನಲ್ಲಿ ಭಾರತ ಒಂದು ಶಕ್ತಿಯಾಗಿ ಗುರುತಿಸುವಂತಾಗಿದೆ. ಇದು ಗ್ರಾಮೀಣ ಕ್ರೀಡೆಯಾದರೂ ಕಾಲಕ್ಕೆ ತಕ್ಕಂತೆ ಆಧುನಿಕತೆಯನ್ನು ಅಳವಡಿಸಿಕೊಂಡು ಬದಲಾವಣೆ ಮಾಡಿಕೊಳ್ಳುವಂತಹ ಚಾಕಚಾಕ್ಯತೆಯುಳ್ಳ ಜಾಣ ಜನರು ಇಲ್ಲಿದ್ದಾರೆ ಎಂದು ಹೇಳಿದರು.

ಪ್ರವಾಸೋದ್ಯಮ ದೃಷ್ಟಿಯಿಂದಲೂ ಕಂಬಳ ಆಕರ್ಷಣೀಯ – ಸುನಿಲ್ ಕುಮಾರ್
ಕಂಬಳ ಸಮಿತಿ ಅಧ್ಯಕ್ಷ, ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ತುಳುನಾಡಿನ ಜಾನಪದ ಕ್ರೀಡೆ ಕಂಬಳ ಆಧುನಿಕ ಸ್ಪರ್ಶದೊಂದಿಗೆ ರಾಜ್ಯವ್ಯಾಪಿ ಪ್ರಸಿದ್ಧಿ ಪಡೆಯುತ್ತಾ ದೇಶ ವಿದೇಶದ ಜನರ ಗಮನ ಸೆಳೆಯುತ್ತಿದೆ. ಮನೆಯ ಮಗುವಿನಂತೆ ಕೋಣಗಳನ್ನು ಪ್ರೀತಿಸಿ ಕಂಬಳವನ್ನು ಬೆಳೆಸಿದ ಕೀರ್ತಿ ತುಳುನಾಡಿನ ಜನತೆಗೆ ಸಲ್ಲುತ್ತದೆ. ವಿದೇಶಿಯರೂ ಕೂಡ ಕಂಬಳವನ್ನು ವೀಕ್ಷಿಸಲು ಬರುತ್ತಿದ್ದು ಪ್ರವಾಸೋದ್ಯಮ ದೃಷ್ಟಿಯಿಂದಲೂ ಕಂಬಳ ಆಕರ್ಷಣೀಯವಾಗಿದೆ ಎಂದು ಹೇಳಿದರು.

ಕಂಬಳಕ್ಕೆ ಸರಕಾರದ ಮೊದಲ ಅನುದಾನ ಬಿಡುಗಡೆಯ ಹೆಗ್ಗಳಿಕೆಯೊಂದಿಗೆ ಮಿಯ್ಯಾರಿನ ಕಂಬಳ ತನ್ನದೆ ಆದ ವಿವಿಧ ವಿಶಿಷ್ಟತೆಯನ್ನು ಹೊಂದಿದೆ. ಆತಂಕಗಳನ್ನು ಮೀರಿ ಸರಕಾರ ಕಂಬಳಕ್ಕೆ ನೀಡಿದ ಪ್ರೋತ್ಸಾಹದಿಂದ ಇಂದಿಗೂ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ. ಕಂಬಳಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಅಧಿವೇಶನದಲ್ಲೂ ಮಾತುಗಳು ಬಂದಿದೆ. ಆದರೆ, ಸರಕಾರದ ಅನುದಾನವನ್ನು ಕಾಯದೆ ದಾನಿಗಳ ಸಹಕಾರದಿಂದ ಪ್ರತಿ ವರ್ಷ ಕಂಬಳ ನಿರತಂಕವಾಗಿ ನಡೆಯುತ್ತ ಬಂದಿದೆ ಎಂದು ಹೇಳಿದ ಸುನಿಲ್ ಕುಮಾರ್ ನಾವೆಲ್ಲರೂ ಒಟ್ಟಾಗಿ ಕಂಬಳವನ್ನು ಬೆಂಬಲಿಸುವ ಕೆಲಸ ಮಾಡೋಣ ಎಂದರು.
ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಂಬಳ ಸಮಿತಿ ಗೌರವ ಸಲಹೆಗಾರ ಎಂ. ಎನ್. ರಾಜೇಂದ್ರ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಪುಣೆ ಶಾಸಕ ಸುನೀಲ್ ಕಾಂಬ್ಳಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ್‌ದಾಸ್ ಅಡ್ಯಂತಾಯ, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ತಾ.ಪಂ. ಸದಸ್ಯ ಮಾಜಿ ಸುಧಾಕರ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ಕಾರ್ಕಳ ಪೋಲಿಸ್ ಉಪಾಧೀಕ್ಷಕರಾದ ಹರ್ಷ ಪ್ರಿಯಂವದ, ತಹಶಿಲ್ದಾರ್ ಪ್ರದೀಪ್ ಆರ್., ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಗೇರು ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಂಬಳ ಸಮಿತಿ ಉಪಾಧ್ಯಕ್ಷ ಅಂತೋನಿ ಡಿಸೋಜ ನಕ್ರೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ ನಲ್ಲೂರು, ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಸೇರಿದಂತೆ ಮೊದಲಾವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯ ಶೆಟ್ಟಿ ಕಂಗಿನಮನೆ ಕಾರ್ಯಕ್ರಮ ನಿರೂಪಿಸಿದರು.









































