ಸಾಗರ : ಅಡಿಕೆ ಆಮದು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಡಿಕೆಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದರು. ಸಾಗರದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಳೆಗೆ ತಕ್ಕ ಬೆಲೆ ನೀಡಬೇಕಿದೆ. ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಹಣ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಬೇಕು. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ನಾನಿಲ್ಲಿಗೆ ಯಾವುದೇ ಪಕ್ಷದ ನಾಯಕನಾಗಿ ಬಂದಿಲ್ಲ. ಕೇಂದ್ರದ ಸಚಿವನಾಗಿ ಯಾವುದೇ ಗರ್ವದಿಂದ ಬಂದಿಲ್ಲ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ನಮ್ಮ ಭಾಗದಲ್ಲಿ ಅಡಕೆ ಬಳಸುತ್ತೇವೆ. ಪೂಜೆ ಸಂದರ್ಭದಲ್ಲಿ ಅಡಿಕೆ ಗಣೇಶನಾಗಿ, ದೇವರಾಗಿ ಬದಲಾಗುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಅಡಿಕೆಯ ಉಪಯೋಗ ಇದೆ. ನಾನು ಕೃಷಿ ಮಂತ್ರಿಯನ್ನು ಭೇಟಿಯಾಗಿ ಬಂದೆ. ನಮಗೆ ಯಾವ ಸರ್ಕಾರ ಇಲ್ಲಿ ಇದೆ ಎಂಬುವುದು ಮುಖ್ಯ ಅಲ್ಲ, ರೈತರ ಸಮಸ್ಯೆ ಬಗೆಹರಿಸುವುದು ಮುಖ್ಯ ಎಂದು ಅವರು ಹೇಳಿದರು. ಅಡಿಕೆ ಬೆಳೆಗಾರರು ಯಾರೂ ಚಿಂತೆ ಮಾಡಬೇಡಿ, ನಿಮ್ಮೊಂದಿಗೆ ನಾವು ಇದ್ದೇವೆ. ವಿಕಸಿತ ಭಾರತ, ವಿಕಸಿತ ಕರ್ನಾಟಕ ನಿರ್ಮಾಣ ಮಾಡಬೇಕಿದೆ. ನಾವು ದೇಶವನ್ನು ನಡೆಸಬೇಕಿದೆ, ಜನರ ಜೀವನ ಸುಧಾರಿಸಬೇಕಿದೆ. ಜನರ ಜೀವನ ಸುಧಾರಿಸಿದರೆ ನಮ್ಮ ಸರ್ಕಾರದ ಆಶಯ ಈಡೇರುತ್ತದೆ ಎಂದು ಚೌಹಾಣ್ ಹೇಳಿದರು.



























