ಹೆಬ್ರಿ : ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿದ್ದ ವಿಚಾರವಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ. 27ರಂದು ಬೆಳಿಗ್ಗೆ ವರಂಗ ಗ್ರಾಮದ ಕಟ್ಟೆ ಜೆಡ್ಡು ಎಂಬಲ್ಲಿ ಮಾತಿಬೆಟ್ಟು ಹೊಳೆಯ ದಡದಲ್ಲಿ ಓರ್ವ ವ್ಯಕ್ತಿ ಮರಳು ರಾಶಿ ಹಾಕುತ್ತಿದ್ದು, ಇನ್ನೊಬ್ಬ ವ್ಯಕ್ತಿ ಪಕ್ಕದ ತೋಟದಲ್ಲಿ ನಿಂತುಕೊಂಡಿದ್ದನು. ಹೆಬ್ರಿ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಜೀವನ್ ಕುಮಾರ್ ಸಿ. ಬರುವುದನ್ನು ಗಮನಿಸಿದ ಮರಳು ರಾಶಿ ಹಾಕುತ್ತಿದ್ದ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದು, ಅಲ್ಲಿಯೇ ಇದ್ದ ಸತೀಶ ಎಂಬವರಲ್ಲಿ ವಿಚಾರಿಸಿದಾಗ ವರಂಗ ಗ್ರಾಮದ ಪಡುಬೆಟ್ಟು ನಿವಾಸಿ ಪ್ರಭಾಕರ ಎಂಬವರು ಸಾಗಾಟದ ಉದ್ದೇಶದಿಂದ ಮಾತಿಬೆಟ್ಟು ನದಿಯಿಂದ ಕೆಲಸಗಾರರ ಸಹಾಯದಿಂದ ಮರಳನ್ನು ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ನಂತರ ಈ ಕುರಿತು ವರಂಗ ಪಂಚಾಯತ್‌ನಲ್ಲಿ ವಿಚಾರಿಸಿದಾಗ ಪರವಾನಗಿ ಇಲ್ಲದೆ ಇರುವ ಬಗ್ಗೆ ಖಚಿತವಾಗಿರುತ್ತದೆ. ಆಪಾದಿತರು ಸ್ಥಳದಲ್ಲಿ 3 ಯುನಿಟ್‌ನಷ್ಟು ಮರಳು ಸಂಗ್ರಹ ಮಾಡಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮರಳು ಅಕ್ರಮ ಸಂಗ್ರಹ – ದೂರು ದಾಖಲು









































