ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿನ್ನದಾಗಲಿದೆ – ಸಲ್ಮಾನ್‌ಗೆ ಮತ್ತೆ ಧಮಕಿ

ಮುಂಬಯಿ: 5 ಕೋಟಿ ರೂ. ಕೊಡು, ಇಲ್ಲದಿದ್ದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿನಗೆ ಬರಲಿದೆ ಎಂದು ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಬಂದಿದೆ. ಮುಂಬಯಿ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದ್ದು, ಇದರಿಂದ ನಟ ಮತ್ತಷ್ಟು ಬೆದರುವಂತಾಗಿದೆ.
ಈ ಸಂದೇಶವನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಅವರು 5 ಕೋಟಿ ರೂ. ಪಾವತಿಸಬೇಕಾಗುತ್ತದೆ. ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕಿಗಿಂತ ಕೆಟ್ಟದಾಗಿರುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ಮುಂಬಯಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಲ್ಮಾನ್‌ ಖಾನ್‌ ಅತ್ಯಾಪ್ತರಾಗಿದ್ದ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (66) ಅವರನ್ನು ಅ.12 ರಂದು ಮುಂಬಯಿಯ ಬಾಂದ್ರಾದಲ್ಲಿರುವ ಅವರ ಪುತ್ರ ಶಾಸಕ ಜೀಶನ್ ಸಿದ್ದಿಕಿ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಕೊಲೆಯ ಹೊಣೆಯನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ವಹಿಸಿಕೊಂಡಿದ್ದು, ಅನಂತರ ಸಲ್ಮಾನ್‌ ಖಾನ್‌ಗೆ ಪ್ರಾಣಭೀತಿ ಶುರುವಾಗಿದೆ. ಅವರ ಭದ್ರತಾ ವ್ಯವಸ್ಥೆಯನ್ನು Y+ ಕ್ಯಾಟಗರಿಗೆ ಏರಿಸಲಾಗಿದೆ. ಇದರ ಬಳಿಕವೂ ಜೀವ ಬೆದರಿಕೆ ಸಂದೇಶ ಬಂದಿರುವುದು ನಟನನ್ನು ಚಿಂತೆಗೀಡು ಮಾಡಿದೆ.









error: Content is protected !!
Scroll to Top