ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಮಾನಹಾನಿಕರ ಬರಹ

ಕಾರ್ಕಳ : ಮಹಿಳೆಯರ ಬಗ್ಗೆ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು, ಬರಹಗಳನ್ನು ಹಂಚುವವರ ಬಗ್ಗೆ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೋರಿ ಕಾರ್ಕಳ ಮಂಡಲ ಬಿಜೆಪಿ ಮಹಿಳಾ ಮೋರ್ಚಾದವರು ಸೆ. 17ರಂದು ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಅವರ ಮೂಲಕ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಬಗ್ಗೆ ಅದರಲ್ಲೂ ರಾಜಕೀಯವಾಗಿ, ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಾದ ಫೇಸಬುಕ್, ವಾಟ್ಸಾಪ್‌ಗಳಲ್ಲಿ ಕೆಲವೊಂದು ವ್ಯಕ್ತಿಗಳು ಅವಾಚ್ಯ-ಅಶ್ಲೀಲ ಹಾಗೂ ಮಾನಹಾನಿಕರ ಪದಗಳನ್ನು ಬಳಸಿ ಪೋಸ್ಟರ್‌ಗಳನ್ನು ಹರಡಿಸುತ್ತಿದ್ದು ಈ ಬಗ್ಗೆ ತಮ್ಮ ಇಲಾಖೆಗೆ ದೂರು ನೀಡಿದ್ದರೂ, ಈವರೆಗೆ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಮಹಿಳೆಯರಾದ ನಮಗೆ ತುಂಬಾ ಬೇಸರ ತರಿಸಿದೆ ಎಂದು ಮನವಿಯಲ್ಲಿ ನೋವು ವ್ಯಕ್ತಪಡಿಸಿದ್ದಾರೆ.

ಕಡ್ತಲ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆಯ ವಿರುದ್ಧ ಕೆಲವೊಂದು ವ್ಯಕ್ತಿಗಳು ಮಾನಹಾನಿಕರ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಆ ವ್ಯಾಪ್ತಿಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಕೂಡ ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ ನಂತರ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ದೂರು ದಾಖಲಾಗಿ ಸುಮಾರು 1 ತಿಂಗಳೇ ಕಳೆದರೂ ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದಾಗಿ ತಮ್ಮ ಇಲಾಖೆ ಕಾರ್ಯವೈಖರಿಯ ಬಗ್ಗೆ ನಮಗೆ ಸಂಶಯ ಮೂಡುವಂತಾಗಿದ್ದು, ಸಮಾಜದಲ್ಲಿ ಪೊಲೀಸ್ ಇಲಾಖೆಯಿಂದ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲ ಎಂಬ ಮನೋಭಾವ ನಿರ್ಮಾಣಗೊಂಡಿದೆ. ಎಲ್ಲೋ ಒಂದು ಕಡೆ ಇಂತಹ ಆರೋಪಿಗಳನ್ನು ಪೊಲೀಸ್ ಇಲಾಖೆಯೇ ರಕ್ಷಿಸುತ್ತಿದೆ ಎಂಬ ಅನುಮಾನದ ಜೊತೆಗೆ ಪೊಲೀಸ್ ಇಲಾಖೆ ಇಂತಹ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾರದಷ್ಟು ದುರ್ಬಲವಾಗಿದೆಯೇ ಎಂಬ ಸಂಶಯ ಹುಟ್ಟುಹಾಕುತ್ತದೆ ಎಂದು ಅವರು ಹೇಳಿದ್ದಾರೆ.

ಭಯದ ವಾತಾವರಣ ನಿರ್ಮಾಣ
ಪೊಲೀಸ್‌ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗೆಗಿನ ಇಂತಹ ಪೋಸ್ಟರ್‌ಗಳು, ಬರಹಗಳನ್ನು ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗಲಿದ್ದು, ಮಹಿಳಾ ಸಬಲೀಕರಣದಂತಹ ಈಗಿನ ವ್ಯವಸ್ಥೆಯಲ್ಲಿ ಮಹಿಳೆಯರು ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಷ್ಟಸಾಧ್ಯವಾಗಬಹುದು. ಒಂದು ಕಡೆ ಸರಕಾರಗಳು ಮಹಿಳೆಯರನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಆದರೆ ಇಂತಹ ಘಟನೆಗಳು ನಡೆದಾಗ ಅದಕ್ಕೆ ಪೊಲೀಸ್‌ ಇಲಾಖೆಯು ತತ್‌ಕ್ಷಣದಲ್ಲಿ ಸ್ಪಂದಿಸದೆ ಇದ್ದಾಗ ಮಹಿಳೆಯರಲ್ಲಿ ಅಂಜಿಕೆ-ಭಯದ ವಾತಾವರಣದಲ್ಲಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ
ಪೊಲೀಸ್ ಇಲಾಖೆಯು ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ-ಅಶ್ಲೀಲ ಮಾನಹಾನಿಕರ ಪೋಸ್ಟರ್‌ಗಳನ್ನು ಹಾಕುವವರ ಬಗ್ಗೆ ಸಕಾಲದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಡ್ತಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರ ವಿರುದ್ಧ ಮಾನಹಾನಿಕರ ಪೋಸ್ಟ್‌ಗಳನ್ನು ಹಾಕಿರುವ ಪ್ರಕರಣದ ಆರೋಪಿಗಳ ಮೇಲೆ 15 ದಿನದ ಒಳಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ ಮಂಡಲವು ಅಜೆಕಾರು ಪೊಲೀಸ್ ಠಾಣೆ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.



































































































error: Content is protected !!
Scroll to Top