ಕತ್ತಲಲ್ಲಿ ಬೆಳಕ ತೋರುವ ದೀವಿಗೆ

ಅಜ್ಞಾನ ತಿಮಿರಾಂಧಸ್ಯಜ್ಞಾನಾಂಜನ ಶಲಾಕಯಾ, ಚಕ್ಷುಋಣ್ಮೀಲಿತಂ ತಸ್ಮೈ ಶ್ರೀ ಗುರವೇ ನಮಃ|

ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನವೆಂಬ ಬೆಳಕಿನ ಕಡೆಗೆ ನಡೆಸುವ ಗುರುವಿಗೆ ನಮನ. ಗುರುವಿನ ಸ್ಥಾನ ಸಮಾಜದಲ್ಲಿ, ಜಗದಲ್ಲಿ, ಅಷ್ಟೇಕೆ ಇಹ ಪರದಲ್ಲೂ ಗುರುತರವಾದುದು. ಗು ಎಂದರೆ ಕತ್ತಲೆ ರು ಎಂದರೆ ಕಳೆಯುವವ. ನಮ್ಮ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವ ಪ್ರತಿಯೊಬ್ಬರೂ ಗುರು ಸಮಾನರು. ಇದರಲ್ಲಿ ನಮ್ಮ ಮಾತಾಪಿತರು, ಪ್ರಕೃತಿಯ ತರು, ಲತೆ, ಕಲ್ಲು ಮಣ್ಣು, ಪಂಚಭೂತಗಳು, ವಿದ್ಯಾದಾನ ಮಾಡಿದ ಗುರುಗಳು, ಬುದ್ಧಿ ಹೇಳಿ ತಿದ್ದಿದ ಹಿರಿಯರು, ಜ್ಞಾನಿಗಳು ಎಲ್ಲರೂ ಬರುತ್ತಾರೆ. ಗುರು ನಿಷ್ಕಲ್ಮಷ ಮನದವನಾಗಿ, ಸ್ವಾರ್ಥ ರಹಿತನಾಗಿ, ಸುಜ್ಞಾನವನ್ನು ಪಡೆದವನಾಗಿ, ಶಿಷ್ಯರಿಗೆ ಆತ್ಮವಿಶ್ವಾಸ ತುಂಬುವವನಾಗಿ, ನುಡಿ ಹಾಗೂ ನಡೆಯಲ್ಲಿ ಅಂತರವಿಲ್ಲದವನಾಗಿ, ಕಷ್ಟದಲ್ಲಿ ಕೈಹಿಡಿದು ನಡೆಸುವ ಬೆಳಕಾಗಿ, ಮತ್ಸರವನ್ನು ತೊರೆದವನಾಗಿ, ಸನ್ಮಾರ್ಗದಲ್ಲಿ ನಡೆಯುವ ಸದಾಚಾರಿಯಾಗಿ ಕತ್ತಲಲ್ಲಿ ಬೆಳಕನ್ನು ತೋರುವ ದೀವಿಗೆಯಾಗಿರಬೇಕು. ಸಮಾಜವನ್ನು ತಿದ್ದುವ, ಕಿರಿಯರಿಗೆ ಮಾರ್ಗದರ್ಶಿಯಾಗಿರುವ ಗುರು ಅತ್ಯಂತ ಜಾಗ್ರತೆಯಿಂದ ಹೆಜ್ಜೆಯನ್ನು ಸರಿದಾರಿಯಲ್ಲಿ ತಾನು ಮೊದಲು ಹಾಕುತ್ತ ತನ್ನ ಶಿಷ್ಯರನ್ನು ತನ್ನ ಹಿಂದೆ ಸನ್ಮಾರ್ಗದಲ್ಲಿ ತರಬೇಕು.

ವಿದ್ಯೆ ಕೊಡದಾ ತಂದೆ
ಬುದ್ಧಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ
ತಾಯಿಯು ಶುದ್ಧ ವೈರಿಗಳು ಸರ್ವಜ್ಞ

ಎಂದು ಸರ್ವಜ್ಞ ಕವಿ ತಿಳಿಸಿದಂತೆ ಶಿಷ್ಯರು ಎಡವಿದಾಗ ಬುದ್ಧಿ ಹೇಳಿ ಸರಿದಾರಿಯಲ್ಲಿ ತರಬೇಕು. ಈ ಬುದ್ಧಿ ಹೇಳುವಾಗ ಮೊದಲು ಮೃದುವಾಗಿ, ಪ್ರೀತಿಯಿಂದ ಅನಿವಾರ್ಯತೆ ಬಂದರೆ ಕಠಿನವಾಗಿ, ಖಾರವಾಗಿ ತಿಳಿಸಬೇಕು. ಈ ಕಾಠಿನ್ಯದ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರಬೇಕು.
ಕಲಿಸುವ ಗುರುವಿಗೆ ಕಲಿಯುವ ದಾಹವಿದ್ದಾಗ, ಅವನ ಕಲಿಕೆ ನಿರಂತರ ಸಾಗಿದಾಗ ಮಾತ್ರ ಗುರು ಕಾಯಕದಲ್ಲಿ ತೃಪ್ತಿ ಕಾಣಬಲ್ಲ. ನೀತವಂತನಾದವ ಮಾತ್ರ ನೀತಿವಂತ, ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸಬಲ್ಲ. ಜ್ಞಾನ, ವಿವೇಕ, ತಾಳ್ಮೆ, ಸರಳತೆ, ಸಮಚಿತ್ತ, ನಿಸ್ವಾರ್ಥ ಮನಸ್ಥಿತಿ ವ್ಯಷ್ಟಿಯಿಂದ ಸಮಷ್ಟಿ ಎಂಬ ಭಾವ ಗುರುವಿನ ಜೀವನವನ್ನು ಸಾರ್ಥಕ್ಯಗೊಳಿಸಬಲ್ಲವು.

ಗುರು ಶಿಷ್ಯರ ಆತ್ಮಾವಲೋಕನವಾಗಬೇಕಿದೆ

ಆದರೆ ಇಂದು ಗುರು ಹಾಗೂ ಶಿಷ್ಯರಿಬ್ಬರೂ ಎಲ್ಲ ರೀತಿಯಿಂದಲೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಇದೆ. ಗುರು ಶಿಷ್ಯರ ಸಂಬಂಧ ಈಗ ಹತ್ತಿರವಾಗಿಲ್ಲ. ಶಿಕ್ಷಕ ಹಾಗೂ ವಿದ್ಯಾರ್ಥಿ ಎನ್ನುವ ಹಂತದಲ್ಲಿ ನಾವಿದ್ದೇವೆ. ಪಾಠವನ್ನು ಕಲಿಸಿದರೆ ನಮ್ಮ ಕೆಲಸ ಮುಗಿಯಿತೆಂಬ ಶಿಕ್ಷಕ ವರ್ಗ ಒಂದೆಡೆಯಾದರೆ ಪಾಠ ಮಾಡುವುದು ಅವರ ಕರ್ತವ್ಯ, ಅವರಿಗೆ ಅದಕ್ಕೆ ಸಂಬಳ ಸಿಗುತ್ತದೆ ಎಂಬುದು ವಿದ್ಯಾರ್ಥಿಗಳ ಧೋರಣೆ. ಗುರು ಶಿಷ್ಯರ ಸಂಬಂಧವನ್ನು ಹಣದಿಂದ ಅಳೆಯುವಂತಾಗಿದ್ದು ದುರಂತ.

ಒಳ್ಳೆಯದನ್ನು, ನೀತಿ ಮಾರ್ಗವನ್ನು, ಶಿಸ್ತನ್ನು ತಿಳಿಸುವಾಗ ಶಿಕ್ಷಕನಾದವನು ಒಳಗಿರುವ ಪ್ರೀತಿಯನ್ನು ಅದುಮಿಟ್ಟು ಹುಸಿಕೋಪದಲ್ಲಿ ಸ್ವಲ್ಪ ಗಂಭೀರವಾಗಿ ಹೇಳಿದರೂ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಆ ಶಿಕ್ಷಕ ವೈರಿಯಂತೆ ಕಾಣುತ್ತಾನೆ ಎಂಬುದು ಕಹಿಯಾದರೂ ಒಪ್ಪಲೇಬೇಕಾದ ಸಂಗತಿ. ಹಿರಿಯರು, ಶಿಕ್ಷಕರು, ಪೋಷಕರು ತಿದ್ದಲು ಹೇಳುವ ಬುದ್ಧಿ ಮಾತುಗಳು ಮಕ್ಕಳಿಗೆ ಅಪಥ್ಯವೆನಿಸುತ್ತದೆ. ಇದಕ್ಕೆ ಕಾರಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೇಳುವ, ನೋಡುವ ನಿಜವಲ್ಲದ ಕೆಲ ದೃಶ್ಯಗಳು. ನಿಜವಾದ ಜೀವನ ಎಂದರೇನು? ಅದು ಯಾವಾಗ? ಹೇಗೆ ಪ್ರಯತ್ನಿಸಿದರೆ ಸಾರ್ಥಕವಾಗುತ್ತದೆ ಎಂಬುದರ ಬಗ್ಗೆ ನಿರಾಸಕ್ತಿ ಕೂಡ ಸಂಬಂಧ ಹಳಸಲು ಕಾರಣವಾಗಿದೆ.

ಗುರುವನ್ನು ಶಿಷ್ಯ ಮೀರಿಸಿದಾಗಲೇ ಗುರುವಿಗೆ ಅಪರಿಮಿತ ಆನಂದ. ಆದರೆ ದೈನಂದಿನ ಪರಿಸ್ಥಿತಿ ಹೇಗಿದೆ ಎಂದರೆ ಶಿಕ್ಷಣ ಪಡೆದು ಹೊರಹೋದ ವಿದ್ಯಾರ್ಥಿಗಳಿಗೆ ತಮಗೆ ವಿದ್ಯಾದಾನ ಮಾಡಿದ ಶಿಕ್ಷಕರು ಅಪ್ಪಿತಪ್ಪಿ ಎದುರು ಸಿಕ್ಕಿದಾಗ ಒಂದು ನಗು ಬೀರಬೇಕೆಂಬುದು ಗೊತ್ತಿರುವುದಿಲ್ಲ. ಶಿಷ್ಯನಾದವ ಎಷ್ಟೇ ಉನ್ನತ ಹುದ್ದೆ ಪಡೆದರೂ ಗುರುವಾದವ ಅವನ ಮುಂದೆ ನಿಂತಾಗ ತಾನು ಈ ಹುದ್ದೆಗೆ ಬರಲು ಎರಡಕ್ಷರ ಕಲಿಸಿದ ಈ ಗುರು ಕಾರಣ ಎಂಬ ಭಾವವಿರಬೇಕು. ಹಾಗಾಗಿ ಶಿಷ್ಯರು ಗುರುವಿಗಿಂತ ಎಂದೂ ದೊಡ್ಡವರಾಗಲು ಸಾಧ್ಯವಿಲ್ಲ ಎಂಬುದನ್ನು ವಿದ್ಯಾರ್ಥಿ ಸಮುದಾಯ ಅರಿತಾಗ ಮಾತ್ರ ಗುರುವಿಗೆ ಗೌರವ ಸಲ್ಲಿಸಿದ ಹಾಗೆ ಆಗುತ್ತದೆ.

ಸಾಮರಸ್ಯ ಬೇಕಿದೆ

ಗುರು-ಶಿಷ್ಯರಲ್ಲಿ ಸುಮಧುರ ಸಾಮರಸ್ಯವಿದ್ದಾಗ ಮುಂದಿನ ಪೀಳಿಗೆ ಸರಿಯಾದುದರ ಕಡೆಗೆ ಹೆಜ್ಜೆ ಹಾಕಬಹುದು. ತನ್ನ ಕೆಲಸವೇನು? ತಾನು ಹೇಗಿರಬೇಕು? ಯಾವುದು ಸರಿ? ಯಾವುದು ತಪ್ಪು? ಎಂಬ ಪರಿಜ್ಞಾನ ಶಿಕ್ಷಕನಿಗಿದ್ದಾಗ ಶಿಷ್ಯನ ಪ್ರಗತಿ ಸಾಧ್ಯ.
ಗುರುಗಳ ಭೌತಿಕ ಮಾರ್ಗದರ್ಶನವಿಲ್ಲದೆ ಕಲಿಕೆ ಅಂದಿನ ಏಕಲವ್ಯನಂತಹ ಮಹಾಮೇಧಾವಿಗಳಂಥವರಿಗೆ ಮಾತ್ರ ಸಾಧ್ಯ. ಹೀಗಿರುವಾಗ ಗುರು ಅಥವಾ ಶಿಕ್ಷಕರ ಸ್ಥಾನ ಅಂದು, ಇಂದು ಮುಂದೂ ಪ್ರಮುಖವಾಗಿದೆ.

ನೈತಿಕ ಮೌಲ್ಯವನ್ನು ಅಗತ್ಯವಿದೆ

ನೈತಿಕತೆ, ಮಾನವೀಯ ಮೌಲ್ಯ, ಸಂಬಂಧಗಳು ಕುಸಿಯುತ್ತಿರುವ ಇಂದಿನ ಸಮಾಜದಲ್ಲಿ ಮುಂದಿನ ಪೀಳಿಗೆಯವರಲ್ಲಿ ನೈತಿಕತೆಯ ಮೌಲ್ಯವನ್ನು ತುಂಬುವ ಗುರುಗಳ ಅವಶ್ಯಕತೆ ಬಹಳಷ್ಟಿದೆ. ಹಾಗಂತ ಅಂಥ ಗುರುಗಳು ಇಲ್ಲವೆಂದಲ್ಲ. ಇದ್ದಾರೆ ಆದರೆ ಮುನ್ನೆಲೆಗೆ ಅವರು ಬರುತ್ತಿಲ್ಲ. ತಮ್ಮ ಕಾಯಕ ಮಾಡಿಕೊಂಡು ಅದರಲ್ಲಿಯೇ ತೃಪ್ತಿ ಕಾಣುವವರು ಅವರು. ಅಂಥವರನ್ನು ಗುರುತಿಸುವ ಕಾರ್ಯವಾಗಬೇಕಿದೆ.
ಆಧುನಿಕ ಯುಗದಲ್ಲಿ ಅಂಗೈಯಲ್ಲಿಯೇ ಮಗುವಿಗೆ ಎಲ್ಲವೂ ದೊರೆಯುತ್ತದೆ. ಬೇಡದ ವಿಷಯಗಳಿಗೆ ಬಹುಬೇಗ ಆಕರ್ಷಿತವಾಗುವ ಮಗು ನೈತಿಕತೆಯನ್ನು, ಮೌಲ್ಯವನ್ನು ಕಲಿಯಲು ಸಾಧ್ಯವಿಲ್ಲ. ಅದನ್ನು ಕಲಿಸುವ ಮಹತ್ವವಾದ ಕಾರ್ಯ ಗುರುಗಳಿಂದ ಆಗಬೇಕಿದೆ. ನೀತಿ ಶಿಕ್ಷಣವನ್ನು ಶಾಲಾ ಅವಧಿಯಲ್ಲಿ ಕಲಿಸುವ ಅವಶ್ಯಕತೆ ಇದೆ. ಶೀಲವಿಲ್ಲದ ಶಿಕ್ಷಣ ಪ್ರಗತಿಗೆ ಮಾರಕವಾದೀತು. ಮಕ್ಕಳಲ್ಲಿ ಮಾನಸಿಕ ಒತ್ತಡ, ಋಣಾತ್ಮಕ ಭಾವನೆಗಳನ್ನು ಹುಟ್ಟುಹಾಕುವ ಮೊಬೈಲ್ ಆಟಗಳು, ಮೊಬೈಲ್ ಬಳಕೆಯನ್ನು ನಿಯಂತ್ರಣ ಮಾಡಬೇಕು. ಈ ಕಾರ್ಯದಲ್ಲಿ ಶಿಕ್ಷಕರು, ಪೋಷಕರು, ಮಕ್ಕಳು ಸಮಾಜ ಒಟ್ಟಾಗಿ ಸಹಕಾರ ನೀಡಬೇಕು.

ಕತ್ತಲಿನಲ್ಲಿ ಬೆಳಕನ್ನು ತೋರುವ ದೀವಿಗೆ ಗುರುವಾದರೂ ಆ ಕತ್ತಲನ್ನು ತೊಡೆಯಬೇಕೆಂಬ ಬುದ್ಧಿ ವಿದ್ಯಾರ್ಥಿಗಳಿಗೆ ಇದ್ದಾಗ ಆ ದೀವಿಗೆಗೆ ಬೆಲೆ ಬಂದೀತು. ಕತ್ತಲಲ್ಲೂ ಕತ್ತಲೇ ಇಲ್ಲವೆಂದು ತಾವು ಕಂಡಿದ್ದೇ ಸತ್ಯವೆಂದು ಸಾಧಿಸಿದರೆ ಗುರು ಕೂಡ ಏನನ್ನೂ ಮಾಡಲಾರದ ಅಸಹಾಯಕ. ಗುರು ಸಾರ್ವಕಾಲಿಕವಾಗಿ ಶಿಷ್ಯವೃಂದದ ಗೌರವಕ್ಕೆ, ಪ್ರೀತಿಗೆ, ಪಾತ್ರವಾಗಲಿ, ನೈತಿಕತೆ, ಮೌಲ್ಯ, ಜ್ಞಾನ, ಈ ಎಲ್ಲ ಧನಾತ್ಮಕ ಗುಣಗಳಲ್ಲಿ ಶಿಷ್ಯರು ಗುರುಗಳನ್ನು ಮೀರಿಸಲಿ ಎಂಬುದೇ ಮಹಾನ್ ಶಿಕ್ಷಕ, ತತ್ವಜ್ಞಾನಿ, ಸಾಧಕ ಸರ್ವೆಪಲ್ಲಿ ಡಾ. ರಾಧಾಕೃಷ್ಣನ್ ಅವರ ಮಹದಾಶಯ ಆಗಿತ್ತು, ಜೊತೆಗೆ ನಿಜವಾದ ಗುರುಗಳ ಆಶಯ ಕೂಡ.

ಶುಭಲಕ್ಷ್ಮಿ ಆರ್ ನಾಯಕ, ಉಪನ್ಯಾಸಕಿ

































































































error: Content is protected !!
Scroll to Top