ಅಟಲ್‌ ಸೇತುವೆಯಿಂದ ಸಮುದ್ರಕ್ಕೆ ಜಿಗಿಯಲು ಯತ್ನಿಸಿದ ಮಹಿಳೆಯ ರಕ್ಷಣೆ

ಮುಂಬಯಿ: ಮುಂಬಯಿಯ ಟ್ರಾನ್ಸ್‌ ಹಾರ್ಬರ್‌ ಲಿಂಕ್‌ ಅಥವಾ ಅಟಲ್‌ ಸೇತುವೆಯಿಂದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಮಹಿಳೆಯನ್ನು ಟ್ಯಾಕ್ಸಿ ಚಾಲಕ ಹಾಗೂ ಪೊಲೀಸರು ಸಿನಿಮೀಯ ರೀತಿಯಲ್ಲಿ ಸಾಹಸದಿಂದ ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಮಹಿಳೆಯನ್ನು ಉಪನಗರ ಮುಲುಂಡ್‌ನ ರೀಮಾ ಮುಕೇಶ್‌ ಪಟೇಲ್‌ (56) ಎಂದು ಗುರುತಿಸಲಾಗಿದೆ. ಸೇತುವೆಯ ತಡೆಬೇಲಿಯಲ್ಲಿ ಕುಳಿತಿದ್ದ ಮಹಿಳೆ ಇನ್ನೇನು ಸಮುದ್ರಕ್ಕೆ ಜಿಗಿಯಬೇಕು ಎನ್ನುವಷ್ಟರಲ್ಲಿ ಟ್ಯಾಕ್ಸಿ ಚಾಲಕ ಧಾವಿಸಿ ಮಹಿಳೆಯನ್ನು ಹಿಡಿದುಕೊಂಡಿದ್ದಾರೆ. ಕೂಡಲೇ ಸೇತುವೆಯಲ್ಲಿ ಪ್ಯಾಟ್ರೋಲಿಂಗ್‌ ಕರ್ತವ್ಯದಲ್ಲಿದ್ದ ಪೊಲೀಸ್‌ ವಾಹನ ಧಾವಿಸಿ ಬಂದಿದ್ದು, ನಾಲ್ವರು ಪೊಲೀಸರು ತಡೆಬೇಲಿ ಏರಿ ಸಾಹಸದಿಂದ ಮಹಿಳೆಯನ್ನು ಮೇಲಕ್ಕೆಳೆದುಕೊಂಡು ರಕ್ಷಿಸಿದ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.


ಜೀನ್ಸ್‌ ಮತ್ತು ಶರ್ಟ್‌ ಧರಿಸಿದ್ದ ಮಹಿಳೆ ಒಂದು ಹಂತದಲ್ಲಿ ಕೈಜಾರಿ ಬೀಳುವ ಸ್ಥಿತಿಯಲ್ಲಿದ್ದರು. ಟ್ಯಾಕ್ಸಿ ಚಾಲಕ ಪ್ರಾಣದ ಹಂಗು ತೊರೆದು ಪೊಲೀಸ್‌ ವಾಹನ ಬರುವ ತನಕ ಆಕೆಯ ಕೈಯನ್ನು ಹಿಡಿದುಕೊಂಡಿದ್ದರು. ನಂತರ ಎಲ್ಲರೂ ಸೇರಿ ಮಹಿಳೆಯನ್ನು ಮೇಲಕ್ಕೆಳೆದುಕೊಂಡಿದ್ದಾರೆ.
ಮುಂಬಯಿಯನ್ನು ನವಿಮುಂಬಯಿಯ ನವಶೇವಾಕ್ಕೆ ಸಂಪರ್ಕ ಕಲ್ಪಿಸಲು ಸಮುದ್ರದ ಮಧ್ಯೆ ನಿರ್ಮಿಸಿರುವ ಅಟಲ್‌ ಸೇತುವೆ ಕಳೆದ ವರ್ಷ ಉದ್ಘಾಟನೆಗೊಂಡ ಬಳಿಕ ಆತ್ಮಹತ್ಯೆ ಸ್ಪಾಟ್‌ ಆಗಿ ಬದಲಾಗಿದೆ. ಹಲವು ಮಂದಿ ಈ ಸೇತುವೆಯಿಂದ ಜಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದ ಬಳಿಕ ಸೇತುವೆ ಮಧ್ಯೆ ವಾಹನ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಮಹಿಳೆ ಸೇತುವೆ ಮಧ್ಯಕ್ಕೆ ಹೇಗೆ ಬಂದಿದ್ದರು ಎಂದು ತಿಳಿದುಬಂದಿಲ್ಲ.





















































error: Content is protected !!
Scroll to Top