ಮಣಿಪಾಲದ ಆಸ್ಪತ್ರೆ ಎದುರೇ ಸಂಭವಿಸಿದ ಘಟನೆ
ಉಡುಪಿ: ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ಕಾರಿನಲ್ಲಿ ಮಲಗಿದ್ದ ಮಗ ಬೆಳಗಾಗುವಾಗ ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ಮಣಿಪಾಲದಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಮೂಲದ ಕಡೂರಿನ ನಿವಾಸಿ ಆನಂದ (37) ಸಾವನ್ನಪ್ಪಿದವರು. ಶುಕ್ರವಾರ ಅಣ್ಣನ ಸ್ನೇಹಿತನೊಂದಿಗೆ ತನ್ನ ತಂದೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ರಾತ್ರಿ ಕಾರಿನಲ್ಲಿ ಮಲಗಿದ್ದರು.
ಆನಂದ ತನ್ನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ ನಂತರ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಹಿನ್ನೆಲೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತನ್ನದೇ ಕಾರಿನಲ್ಲಿ ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದರು.
ಬೆಳಗಾಗುವಷ್ಟರಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿಯಲಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























































