ಕೋಲ್ಕತ್ತಾ ಘಟನೆ ವಿರುದ್ಧ ಇಂದು ದೇಶಾದ್ಯಂತ ವೈದ್ಯರ ಮುಷ್ಕರ
ಬೆಂಗಳೂರು : ಕೊಲ್ಕತ್ತಾದಲ್ಲಿ ವೈದ್ಯೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ (ಆ.17) ಕರ್ನಾಟಕದಲ್ಲೂ ವೈದ್ಯರು ಬಂದ್ ಆಚರಿಸಲಿದ್ದು, ಈಂದು ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆಗಳ ಒಪಿಡಿ ಬಂದ್ ಆಗಲಿವೆ.
ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಷನ್ಗಳು ಬೆಂಬಲ ಘೋಷಿಸಿರುವುದರಿಂದ ಇಂದು ರಾಜ್ಯಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ.
24 ಗಂಟೆಗಳ ಕಾಲ ಒಪಿಡಿ ಸೇವೆ ಸ್ಥಗಿತಗೊಳಿಸಲು ಆಸ್ಪತ್ರೆಗಳು ನಿರ್ಧರಿಸಿವೆ. ಇದರಿಂದ ಮಕ್ಕಳು, ವಯಸ್ಸಾದವರಿಗೂ ಒಪಿಡಿ ಸೇವೆ ಇರುವುದಿಲ್ಲ. ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ನಡೆಯಲಿದೆ. ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನು ಮಾತ್ರ ನೀಡಲಿದ್ದಾರೆ. ಇದರ ಜೊತೆ ಖಾಸಗಿ ವೈದ್ಯರು ಐಎಂಎ ಸಂಘದ ಎದುರು ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಆದರೆ ಅಪಘಾತ ಮುಂತಾದ ಎಮರ್ಜೆನ್ಸಿ ಕೇಸ್‌ಗಳಿಗೆ ಮಾತ್ರ ಚಿಕಿತ್ಸೆ ಸಿಗಲಿದೆ. ಕೊಲ್ಕತ್ತಾದ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು. ಹಿಂಸಾಚಾರದ ವಿರುದ್ಧ ವೈದ್ಯರಿಗೆ ರಕ್ಷಣೆ ಒದಗಿಸಬೇಕು. ಆಸ್ಪತ್ರೆಗಳನ್ನು ಸೇಫ್ ಝೋನ್ ಎಂದು ಘೋಷಿಸಲು ಐಎಂಎ ಆಗ್ರಹಿಸಿ ಪ್ರತಿಭಟನೆಗೆ ಕರೆಕೊಟ್ಟಿದೆ.
ಇಂದು ಯಾವೆಲ್ಲಾ ಸೇವೆಗಳು ಇರುತ್ತವೆ?

*ಎಮರ್ಜೆನ್ಸಿ ಸೇವೆ
*ಮೆಡಿಕಲ್ ಶಾಪ್ಸ್
*ಇನ್ ಪೇಷೆಂಟ್ ಸೇವೆ
*ಹೆರಿಗೆ, ಎಮರ್ಜೆನ್ಸಿ ಸರ್ಜರಿ
ಯಾವೆಲ್ಲ ಸೇವೆಗಳು ಲಭ್ಯವಿಲ್ಲ?
*ಒಪಿಡಿ
*ಡಯಾಲಿಸಿಸ್
*ಕ್ಲಿನಿಕ್ ಸೇವೆ
*ಮಕ್ಕಳ ಒಪಿಡಿ
*ಡೆಂಟಲ್ ಸರ್ವಿಸ್
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳು ದೊರೆಯಲಿವೆ. ಆದರೆ, ವೈದ್ಯರು ಕಪ್ಪುಪಟ್ಟಿ ಧರಿಸಿ ಸೇವೆ ನೀಡಲಿದ್ದಾರೆ.
ಐಎಂಎ ವ್ಯಾಪ್ತಿಯ ವೈದ್ಯರು, ಫನಾ ಬೆಂಬಲಿತ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್, ಮಕ್ಕಳ ವೈದ್ಯರ ಅಸೋಸಿಯೇಷನ್, ಅರ್ಥೋಪಿಟಿಕ್ ಅಸೋಸಿಯೇಷನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್ ಹಾಗೂ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.


























