ಮೂಡುಬಿದಿರೆ: ಸಾರ್ವಜನಿಕ ಶಾಂತಿ ಭಂಗ ಮಾಡಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಒಂಟಿಕಟ್ಟೆಯ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಸಂಜೆ ಮೂಡುಬಿದಿರೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಒಂಟಿಕಟ್ಟೆಯ ಪ್ರಕಾಶ್ ಕೋಟ್ಯಾನ್ ಮತ್ತು ಸತ್ತಾರ್ ಎಂಬವರನ್ನು ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ ಅವರು ನಿಲ್ಲಿಸಿ ದ್ವಿಚಕ್ರ ವಾಹನದ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಆಗ ದಾಖಲೆ ಇಲ್ಲ ನಾಳೆ ತಂದು ಕೊಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಏಕಮುಖ ರಸ್ತೆಯಲ್ಲಿ ಇನ್ನೊಂದು ವಾಹನ ಬಂದಿದ್ದು ಅವರಿಗೂ ಗಾಡಿಯನ್ನು ಸೈಡಿನಲ್ಲಿ ನಿಲ್ಲಿಸುವಂತೆ ಸೂಚಿಸಿದಾಗ ಅವರೂ ನಮ್ಮ ಸಂಬಂಧಿಕರೆಂದು ಪ್ರಕಾಶ್ ದರ್ಪದಿಂದ ಹೇಳಿದ್ದಲ್ಲದೆ ಬೈಕ್‌ನಲ್ಲಿ ತ್ರಿಬಲ್ ರೈಡ್ ಹೊರಟಿದ್ದರು. ಆಗ ಮತ್ತೆ ಪೊಲೀಸರು ಮತ್ತು ಈ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಪ್ರಕಾಶ್, ವಿಜೇತ್ ಮತ್ತು ಸತ್ತಾರ್ ಪೊಲೀಸರ ಜತೆ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕ ಶಾಂತಿ ಭಂಗ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮೂವರನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ಪ್ರಕಾಶ್ ಮತ್ತು ವಿಜೇತ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆಗ ಅವರು ಅಮಲು ಪದಾರ್ಥ ಸೇವಿಸಿರುವುದು ಸಾಬೀತಾಗಿ ಡ್ರಿಂಕ್ & ಡ್ರೈವ್ ಕೇಸು ದಾಖಲಾಗಿದೆ.
ಪ್ರಕಾಶ್ ಕೋಟ್ಯಾನ್ ಮೂಡಾ ಸದಸ್ಯನಾಗಿದ್ದರೆ, ಸತ್ತಾರ್ ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಿಜೇತ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ.
ಈ ಮೂವರು ಪೊಲೀಸರ ಜೊತೆ ಜಗಳವಾಡುತ್ತಿರುವ ವೀಡಿಯೊ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗಿತ್ತು.
ಪೊಲೀಸರನ್ನು ದಬಾಯಿಸಿದ ಮೂವರ ವಿರುದ್ಧ ಪ್ರಕರಣ ದಾಖಲು


























