ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಯ ಬರ ನೀಗಿಸಿದ ಕಾಂತಾರ

ಬೆಂಗಳೂರು : ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಆಗಿಬಿಟ್ಟಿದ್ದವು. ಆ ಬರವನ್ನು ಈಗ ನೀಗಿದ್ದು ನಟ ರಿಷಬ್ ಶೆಟ್ಟಿ. ಕಾಂತಾರ ಚಿತ್ರದ ಅಭಿನಯಕ್ಕೆ ಶ್ರೇಷ್ಠ ನಟ ರಾಷ್ಟ್ರೀಯ ಪ್ರಶಸ್ತಿಗೆ ರಿಷಭ್‌ ಶೆಟ್ಟಿಯವರು ಭಾಜನರಾಗುವುದರೊಂದಿಗೆ ಕನ್ನಡದ ಮುಖ್ಯವಾಹಿನಿ ಸಿನೆಮಾಗಳ ನಾಯಕ ನಟನೊಬ್ಬ ಬಹಳ ವರ್ಷಗಳ ಬಳಿಕ ಈ ಪ್ರಶಸ್ತಿಯನ್ನು ಪಡೆದುಕೊಂಡ ಹಿರಿಮೆ ಕನ್ನಡಕ್ಕಾಗಿದೆ.
ಈ ವರ್ಷ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಸಹಿತ ಹಲವು ದಿಗ್ಗಜ ನಟರ ತೀವ್ರ ಸ್ಪರ್ಧೆಯಿತ್ತು. ಆದರೆ ರಿಷಬ್ ಶೆಟ್ಟಿಯ ಕಾಡುಬೆಟ್ಟು ಶಿವನ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಒಲಿದಿದೆ. ಕನ್ನಡ ಸಿನಿಮಾಕ್ಕೆ, ಕರ್ನಾಟಕದ್ದೇ ನಟನಿಗೆ ಒಲಿಯುತ್ತಿರುವ ಮೊದಲ ರಾಷ್ಟ್ರಪ್ರಶಸ್ತಿ ಇದು ಎನ್ನಲಾಗಿದೆ.
ದಶಕಗಳ ಹಿಂದೆ ನಟ ಕಮಲ್ ಹಾಸನ್ ಸಹೋದರ ಚಾರುಹಾಸನ್ ಅವರಿಗೆ ಕನ್ನಡದ ‘ತಬರನ ಕತೆ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ದೊರೆತಿತ್ತು. ಅದಾದ ಬಳಿಕ ‘ನಾನು ಅವನಲ್ಲ ಅವಳು’ ಸಿನಿಮಾದ ಅತ್ಯುತ್ತಮ ನಟನೆಗೆ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿತ್ತು. ಅದಾದ ಬಳಿಕ ಇನ್ಯಾವುದೇ ಕನ್ನಡದ ನಟರಿಗೆ ರಾಷ್ಟ್ರಪ್ರಶಸ್ತಿ ದೊರೆತಿರಲಿಲ್ಲ. ಇದೀಗ ಆ ಬಹು ಸಮಯದ ಬರವನ್ನು ರಿಷಭ್‌ ಶೆಟ್ಟಿ ನೀಗಿಸಿದ್ದಾರೆ.

ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದು ಮಾತ್ರವಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಕರಾವಳಿಯ ದೈವಾರಾಧನೆಯ ಕಥೆಯುಳ್ಳ ಸಿನೆಮಾಕ್ಕೆ ರಿಷಭ್‌ ಶೆಟ್ಟಿಯವರು ಹುಟ್ಟೂರು ಕುಂದಾಪುರ ಸಮೀಪದ ಕೆರಾಡಿಯಲ್ಲಿ ಶೂಟಿಂಗ್‌ ಮಾಡಲಾಗಿತ್ತು.
ಆರಂಭದಲ್ಲಿ ಹಳ್ಳಿಯ ಬೇಜವಾಬ್ದಾರಿಯ, ಸಿಡುಕು ಸ್ವಭಾವದ, ತಮಾಷೆ ಸ್ವಭಾವದ ಯುವಕನಾಗಿ ಕಣಿಸಿಕೊಂಡಿದ್ದ ರಿಷಭ್‌ ಶೆಟ್ಟಿ ಕ್ಲೈಮಾಕ್ಸ್‌ನಲ್ಲಿ ದೈವ ನರ್ತಕನಾಗಿ ಅದ್ಭುತ ಅಭಿನಯ ನೀಡಿದ್ದರು. ಗುಳಿಗ ದೈವ ಮೈಮೇಲೆ ಬಂದಾಗಿನ ಅವರ ಅದ್ಭುತ ನಟನೆ ಇವೆಲ್ಲವನ್ನೂ ಪರಿಗಣಿಸಿ ರಿಷಭ್‌ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲಾಗದೆ. ಕಳೆದ ವರ್ಷ ಪುಷ್ಪ ಸಿನಿಮಾದ ಅತ್ಯುತ್ತಮ ನಟನೆಗಾಗಿ ತೆಲುಗಿನ ಅಲ್ಲು ಅರ್ಜುನ್ ಅವರಿಗೆ ನೀಡಲಾಗಿತ್ತು. ಈ ಬಾರಿ ರಿಷಭ್‌ ಶೆಟ್ಟಿ ಪಾಲಾಗಿದೆ.
ಕಾಂತಾರದ ಎರಡನೇ ಭಾಗ ತಯಾರಾಗುತ್ತಿರುವಾಗಲೇ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಗಮನಾರ್ಹ. ಒಟ್ಟಾರೆಯಾಗಿ ಈ ಪ್ರಶಸ್ತಿಯಿಂದ ಕನ್ನಡ ಚಿತ್ರರಂಗಕ್ಕೂ ದೊಡ್ಡಮಟ್ಟದ ಉತ್ತೇಜನ ಸಿಕ್ಕಿದಂತಾಗಿದೆ.































































































error: Content is protected !!
Scroll to Top