ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪೋಕ್ಸೊ ಕೇಸ್ ಸಂಬಂಧ ತನಿಖೆ ಎದುರಿಸಲು ಇಂದು ಸಿಐಡಿ ಎದುರು ಹಾಜರಾಗಲಿದ್ದಾರೆ. ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ಎಫ್‌ಐಆರ್ ದಾಖಲಾಗಿತ್ತು. ಪ್ರಕಣದ ಹೆಚ್ಚಿನ ತನಿಖೆಗೆ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಇದಾದ ಬಳಿಕ ಸಿಐಡಿ ಬಿಎಸ್‌ವೈ ಅವರನ್ನು ಕರೆದು ವಾಯ್ಸ್ ಸ್ಯಾಂಪಲ್ ಪಡೆದು ತನಿಖಾಧಿಕಾರಿಗಳು ಅವರನ್ನು ಕಳುಹಿಸಿಕೊಟ್ಟಿದ್ದರು.
ಹೆಚ್ಚಿನ ವಿಚಾರಣೆಗೆ ಬಿಎಸ್‌ವೈಗೆ ಸಿಐಡಿ ನೋಟಿಸ್ ನೀಡಿತ್ತು. ಬಿಎಸ್‌ವೈ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದರಿಂದ ಸಿಐಡಿ ವಾರೆಂಟ್ ಜಾರಿ ಮಾಡಿ ಬಂಧನಕ್ಕೆ ಮುಂದಾಗಿತ್ತು. ಈ ವೇಳೆ ಕೋರ್ಟ್ ಬಂಧಿಸದಂತೆ ತಡೆ ನೀಡಿ ಇಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರಿಂದ ಸಿಐಡಿ ಮುಂದೆ ಬಿಎಸ್‌ವೈ ಇಂದು ತನಿಖೆಗೆ ಹಾಜರಾಗಲಿದ್ದಾರೆ. ತನಿಖಾಧಿಕಾರಿ ಪೃಥ್ವಿ ಎದುರು ಬಿಎಸ್ ಯಡಿಯೂರಪ್ಪ ತನಿಖೆಗೆ ಹಾಜರಾಗಲಿದ್ದಾರೆ.









































